ನಮ್ಮ ಹಳ್ಳಿ-ಜೀವನ
ಡಾಕುಳಗಿ, ಸಂಗೊಳಗಿ, ಬಾವಗಿ, ರೇಕುಳಗಿ, ಬಂಬಳಗಿ, ಮಂಗಲಗಿ, ತಾಳಮಡಗಿ, ಹುಡಗಿ, ಬೋತಗಿ, ಹೀಗೆ ನಮ್ಮ ಊರುಗಲು ಇದ್ದವು. ಬೋತಗಿದಾಗ ಮೂಕನೊರ್ ಮನಿಮುಂದ ಒಂದು ಹಳೀ ಮನಿ ಇತ್ತು. ಒಬ್ಬ ಅಜ್ಜಿ ಮತ್ತು ಅವಳ ಮುಮ್ಮಗ ಮಾತ್ರ ಅದರಲ್ಲಿ ಇದ್ದರು. ವಿಶಾಲವಾದ ಅಂಗಳ ಹಾಗೂ ವಿಶಾಲವಾದ ಪಡಸಾಲಿ ಇತ್ತು. ಅಂಗಳಾಗ ಒಂದು ಬೇವಿನ ಮರ ಇತ್ತು. ಮನೆಯ ಮಾಲಿಕ ಯಜಮಾನ ಇರಲಿಲ್ಲ ಆ ಮನಿ ಒಳಗ ನಮ್ಮ ತಾತ ಮತ್ತು ಅಜ್ಜಿ ವಾಸ ಮಾಡುತ್ತಿದ್ದರು. ನಮ್ಮಮ್ಮನ ಹೆತ್ತವರು ಅವರು. ನಾ ಸಣ್ಣಾವ ಇದ್ದಾಗ ಅಲ್ಲಿಗೆ ಹೋಗುತ್ತಿದ್ದೆ. ಸೀತಾಳಗೆೇರಿಯಿಂದ ವಾಯುವ್ಯ ದಿಕ್ಕಿನಲ್ಲಿ ಎರಡು ಕಿಲೋಮೀಟರ್ ನಡಕೊಂದು ಬಂದರೆ ಬೋತಗಿ ಬರುತ್ತದ.
ಆ ಊರಾಗ ಕುಂಬಾರ ಇರಲಿಲ್ಲ ಅಂತ, ನಮ್ಮ ತಾತಾನನ್ನು ಸೀತಾಳಗೇರಿ ಊರಿನಿಂದ ಕರೆಸಿಕೊಂಡಿದ್ದರು. ತಾತಾನ ಕಿರಿಮಗಾ ಕಲ್ಲಪ್ಪನು, ಅವರೊಂದಿಗೆ ಇರುತ್ತಿದ್ದ. ಅವನು ಇನ್ನೂ ದನಾ ಕಾಯುವುದರಲ್ಲಿ ಪಳಗಿದ್ದ. ಅದೇ ಆತನ ಕಸಬು ಇತ್ತು.
ದನ ಸಾಕುವ ಕೆಲಸ ಮಾಡಿ; ಹಾಲು ಹೈನ, ಮೊಸರು, ಬೆಣ್ಣೆ ಆದಿಗಳನ್ನು ಮಾಡುತ್ತಿದ್ದರು. ಎರಡು ಹೈನದ ಏಮ್ಮೆಗಳು ಇದ್ದವು. ಹಾಲಿಗೆ ಹೆಪ್ ಹಾಕುವುದು, ಮುಂಜಾನೆ ಎದ್ದು ಮಜ್ಜಿಗೆ ಮಾಡುವುದು, ಬೆಣ್ಣೆ ತೆಗಿಯುವುದು, ಅಜ್ಜಿಯ ಕೆಲಸ ಆಗಿತ್ತು. ನನಗೆ ಮುಂಜಾನೆ ಮೊಸರು ರೊಟ್ಟಿ ನ್ಯಾಯಾರಿ ಸಿಗುತ್ತಿತ್ತು. ಕೆನಿ ಮೊಸರು ಅಂದರ ನನಗೆ ಬಲು ಖುಸಿ ಆಗುತ್ತಿತ್ತು.
ತಾತನಿಗೆ ಊರ ಗೌಡ ಒಂದಿಸ್ಟು ಇನಾಮತಿ ಹೊಲ ಕೊಟ್ಟಿದ್ದ. ಅದು ಊರಿಗೆ ಹತ್ತಿರ, ಉತ್ತರ ದಿಕ್ಕಿನಲ್ಲಿ ಇತ್ತು. ಮಳಿ ಬಂದರ ಊರಾಗ ಕೆಸರು ಆಗುತ್ತಿತ್ತು. ಹಾಗಂತ ಊರ ದಾರಿದಾಗ ಕಲ್ಲು ಹಾಸಿದ್ದರು. ಆ ಊರಿನಿೊದ ಸೀತಾಳಗೆರಿಗೆ ಹೋಗಬೇಕಾದರ, ಹಾದ್ಯಾಗ ಒಂದು ಹಳ್ಳ ಹಾರಿತ್ತಿತ್ತು. ಹಳ್ಳ ದಾತಬೇಕು ಅಂದರ ಕಾಲೆಲ್ಲ ಕೆಸರು ಮೆತ್ತುತ್ತಿತ್ತು. ಹೀಂಗಿತ್ತು ಈ ಬೋತಗಿ ಊರು.
ಕೆಲ ಕಾಲದ ನಂತರ, ಅಜ್ಜ-ಅಜ್ಜಿ ಬಾಜಾರನಾಗ, ಶಡ್ ಹೊಡದು ತಗಡಾ ಹಾಕಿ ಒಂದು ಮನಿ ಮಾಡಿ ಉಳಕೊಂಡುರು. ಆದರೆ ಯಾರೋ ಆ ಮನಿಗಿ ಬೆಂಕಿ ಇಟ್ಟರು. ಬಟ್ಟೆಬರಿ, ಹಾಗು ಸಂಗ್ರಹಿಸಿದ ಆಹರ ಧಾನ್ಯಗಳು ಎಲ್ಲಾ ಸುಟ್ಟು ಹೋದವು. ಜನಾ ಪಾಪ ಅಂತ ಮರುಗಿದರು. ಈಗ ವಿಧಿ ಇಲ್ಲದೆ ಇನ್ನೊಂದು ಕಡೆ ಮನಿ ಮಾಡಿ ಉಳಕೊಂಡುರು ಅವರು.
ಕೊನಿಗಿ ಊರ ಗೌಡ ಇನಾಮತಿ ಹೊಲ ತಾತನ ಹೆಸರಿಗೆ ಮಾಡಲಿಲ್ಲ. ಊರಾಗ ಜಾಗಾ ಇಲ್ಲ, ಅಡ್ಯಾಗ ಹೊಲ ಇಲ್ಲ, ಅಂತ ಗುಂಡಪ್ಪ ತಾತ ಸಿಟ್ಟಾಗಿ, ಊರ ಬಿಟ್ಟು ಸಿತಾಳಗೇರಿಗಿ ಹಿಂತಿರುಗಿ ಬಂದ ಸಂಗಮ್ಮಅಜ್ಜಿಯ ಸಂಗಡ. ಅಲೆಮಾರಿ ಜೀವನ ಸಾಕೆಂದು ತಮ್ಮುರಲ್ಲಿ ಬಂದು ಬದುಕು ಪುನಃ ಕಟ್ಟಿಕೊಂಡರು. ಕಲ್ಲಪ್ಪನ ಮದುವೆ ಹಾಗೂ ಸಣ್ಣ ಮಗಳು ನಾಗಮ್ಮನ ಮದುವೆ ಒಟ್ಟಿಗೆ ನೆರವೇರಿಸಿದರು.
ನಮ್ಮ ಮನೆತನ
ತಿಪ್ಪಣ್ಣ ಶಿವಪ್ಪನ ಮೊದಲನೆಯ ಹೆಂಡತಿಯಿಂದ ಹುಟ್ಟಿದವ. ತಂದೆ ಇನ್ನೊಂದು ಮದಿವೆ ಮಾಡಿಕೊಂಡಾಗಿನಿಂದ ತಿಪ್ಪಣ್ಣ ಬೇರೆಯೊಂದು ಕೋಣೆಯಲ್ಲಿ ಇರುತ್ತಿದ್ದ. ತಿಪ್ಪಣ್ಣನ ಮೊದಲನೆಯ ಹೆಂಡತಿ ತೀರಿಕೊಂಡಳು. ಬಹಳ ದಿನ ಒಂಟಿಯಾಗಿಯೇ ಇದ್ದ.ನರಸಮ್ಮ ತಿಪ್ಪಣ್ಣನಿಗೆ ಎರಡನೆಯ ಹೆಂಡತಿಯಾಗಿ ಬಂದಳು. ನರಸಮ್ಮ ತಿಪ್ಪಣ್ಣನಿಂದ ಮೂರು ಗಂಡು ಹಾಗು ಎರಡು ಹೆಣ್ಣುಮಕ್ಕಳ ತಾಯಿ ಆದಳು. ಶಿವಪ್ಪನ ಎರಡನೆಯ ಹೆಂಡತಿಯಿಂದ ಹನುಮಂತ ಹುಟ್ಟಿದ. ಹಾಗಾಗಿ ತಿಪ್ಪಣ್ಣ ಮತ್ತು ಹನುಮಂತ ಭಾಗಾದಿಗಳಾದರು. ಮಲಮಗ ತಿಪ್ಪಣ್ಣನಿಗೆ ಬೆಳ್ಳಿ ಬಂಗಾರದ ಒಡವೆಯಲ್ಲಿ ಪಾಲು ಸಿಗಲಿಲ್ಲ. ೪ ಎಕರೆ ೧೬ ಗುಂಟೆ ಹೊಲದಲ್ಲಿ ತಲಾ ಅರ್ಧ ಹಂಚಿಕೆಯಾಯಿತು.
ನರಸಮ್ಮನ ಮೊದಲ ಮಗಳು ರತ್ನಮ್ಮ. ಇವಳು ಬೆಳಕೇರಿಗೆ ಹೋದಳು. ಅವಳ ನಂತರ ಹುಟ್ಟಿದ ಇಬ್ಬರು ಗಂಡು ಮಕ್ಕಳಲ್ಲಿ ಮೊದಲನೆಯವ ಗಡಿಗೆ ಮಾಡಲು ಕಲಿತಿದ್ದ. ಆದರೆ ಬೇಮಾರಿ ಗಡ್ಡಿ ಆಗಿ ತೀರಿಕೊಂಡ. ತಿಪ್ಪಣ್ಣನು ತೀರಿಹೋದ. ಎರಡನೆಯ ಮಗ ಗುಂಡಪ್ಪ ವಯಸ್ಸಿಗೆ ಬಂದ ಮತ್ತು ಸೀತಾಳಗೇರಿಯಲ್ಲಿ ಹುಟ್ಟಿದ ತಿಪ್ಪಮ್ಮಳನ್ನು ಮದುವೆಯಾದನು. ಗುಂಡಪ್ಪನ ನಂತರ ಹುಟ್ಟಿದವಳು ಶಿವಮ್ಮ. ಇವಳು ತೆಲಂಗಾಣದ ಕೊಲ್ಲೂರಿಗೆ ಮದುವೆಯಾಗಿ ಹೋದಳು. ಅವಳ ನಂತರ ಹುಟ್ಟಿದವನೇ ನಾಗಪ್ಪ. ಇವ ಕೊನೆಯವ. ನಾಗಪ್ಪ ನಾಗಮ್ಮ ಎನ್ನುವವಳನ್ನು ಮದುವೆಯಾದನು.
ಗುಂಡಪ್ಪ ಮತ್ತು ನಾಗಪ್ಪ ಕೂಡಿಯೇ ಇದ್ದರು.ಮನೆಯ ಕಾರೋಬಾರ ತಾಯಿ ನರಸಮ್ಮ ನೋಡಿಕೊಳ್ಳುತ್ತಿದ್ದಳು. ಈ ಮನೆಯಲ್ಲಿ ಗುಂಡಪ್ಪನ ಪುತ್ರನಾಗಿ ತುಕಾರಾಮ ಹುಟ್ಟಿದ.
No comments:
Post a Comment