ನಡೆದು ಬಂದ ದಾರಿ:
1967-ಅಪ್ಪ ಇಲ್ಲದಾದ:
ಹೊಲ ಕೊಳ್ಳುವ ಪ್ರಕ್ರಿಯೆಯಲ್ಲಿ ಮೋಸಹೋಗಿ, ತಮ್ಮ ಜೀವನದುದ್ದಕ್ಕೂ ಅರ್ಜಿತ ಸಂಪತ್ತನ್ನು ಕಳೆದುಕೊಂಡರು ಮತ್ತು ಭ್ರಮಿತರಾಗಿ ಆತ್ಮಹತ್ತೆಗೆ ಶರಣಾದರು. ದುರ್ಗಾಸ್ಟಮಿಯ ಮಧ್ಯರಾತ್ರ್ರಿ ಎದ್ದು ಹೊಲಕ್ಕೆ ಹೋಗಿ ಅಲ್ಲಿರುವ ಬೇವಿನ ಮರಕ್ಕೆ ಉರುಳು ಹಾಕಿಕೊಂಡು ಪ್ರಾಣ ತ್ಯಾಗ ಮಾಡಿದರು.
ಅಪ್ಪನಿಲ್ಲದ ನಾನು ನನ್ನ ಹತ್ತನೇ ತರಗತಿಯ ಪರೀಕ್ಷೆ ಬರೆದ ಮೇಲೆ, ಅಮ್ಮ ನನ್ನ ಮದುವೆ ಮಾಡಿದಳು. ನನಗೆ ಉನ್ನತ ಶಿಕ್ಷಣದ ಆಸೆ ಇದ್ದುದರಿಂದ, ಹೆಂಡತಿಯನ್ನು ತವರೂರಿನಲ್ಲಿಯೇ ಬಿಟ್ಟು ಕಾಲೇಜು ಸೇರಿ ವಿಜ್ಞಾನ ಪದವಿ ಪಡೆದೆ. ಕಾಲೇಜಿನಲ್ಲಿದ್ದಾಗ ಆಗಾಗ್ಗೆ, ಅತ್ತೆಯ ಮನೆಗೆ ಹೋದಾಗ, ವಿನಾ ಕಾರಣ ಅತ್ತೆಯು ನಮ್ಮನ್ನು ನಿಂದಿಸುವುದು ನನಗೆ ಹಿಂಸೆ ಅನ್ನಿಸುತಿತ್ತು. ಮನದಲ್ಲಿ ಅಪ್ಪನನ್ನು ನೆನೆದು ದುಃಖಪಡುತ್ತಿದ್ದೆ. 1974ರಲ್ಲಿ ಒಂದು ಸಣ್ಣ ಸರಕಾರಿ ನೌಕರಿಯಲ್ಲಿದ್ದೆ. ಸ್ವಂತಗಳಿಕೆಯ ಜೀವನದ ಆರಂಭದ ದಿನಗಳು. ಕೈಯಲ್ಲಿ ಕಾಸು ಇರಲಿಲ್ಲ. ತಾಯಿಗೆ ಕ್ಷಯರೋಗದಿ ನಿತ್ರಾಣ ಉಂಟಾಗಿ, ಅವಳನ್ನು ಮಹಾರಾಸ್ಟ್ರದ ಅಂಬಾಜೋಗೈ ಆಸ್ಪತ್ರೆಗೆ ಒಂದು ತಿಂಗಳು ಒಳರೋಗಿಯಾಗಿ ಸೇರಿಸಿ ಬಂದೆ. ತಿಂಗಳು ಪಗಾರ ಬಂದ ಕೂಡಲೆ ಅಮ್ಮನನ್ನು ನೋಡಲು ಹೋದೆ. ಅಮ್ಮ ಚೇತರಿಸಿಕೊಂಡಿದ್ದಳು. ಅವಳನ್ನು ಓಷಧಕೊಡಿಸಿ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಬಂದೆ.
ಇದಾದ ಕೆಲವು ದಿನಗಳಲ್ಲಿ ತಂಗಿ ಬಾಣಂತನದಲ್ಲಿ ಗಂಭೀರ ಕಾಯಿಲೆಗೆ ಒಳಗಾದಳು. ಅವಳನ್ನು ಬೀದರಿನ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿ, ಆರೈಕೆಮಾಡುವ ಖರ್ಚು ನಾನೇ ನಿಭಾಯಿಸಬೇಕಾಯಿತು. ಅವಳು ಚೇತರಿಸಿಕೊಂಡಳು. ನನಗೆ ಉನ್ನತ ನೌಕರಿಯ ಆಸೆ ಇತ್ತು. ಅದಕ್ಕಾಗಿ ಹೈದರಾಬಾದಿನಲ್ಲಿ ಒಂದು ಪರೀಕ್ಷೆ ಬರೆದೆ. ಅದು ಸರಿಯಾಗಿ ಆಗಲಿಲ್ಲ. ಅಲ್ಲಿಯವರೆಗೆ ನನಗೆ ಪರೀಕ್ಷೆಯಲ್ಲಿ ಫೇಲ್ ಅನ್ನುವ ಅನುಭವವೇ ಇರಲಿಲ್ಲ. ಇದು ನನಗೆ ಚಿಂತೆಯ ಕಾರಣವಾಯಿತು. ನನಗೆ ರಾತ್ರೀ ಮಲಗಿದರೆ ನಿದ್ದೆಯೇ ಬರಲಿಲ್ಲ.
ನಾನು ಭ್ರಮಿತನಾದೆ. ಇರುವ ಕೆಲಸಕ್ಕೆ ಹೋಗಲಿಲ್ಲ. ಬಹಳ ದಿನ ಕಳೆದ ಮೇಲೆ ಕೆಲಸಕ್ಕೆ ಹಾಜರಾಗಲು ಸರಕಾರಿ ನೋಟೀಸು ಬಂತು. ಆದರೂ ಸಣ್ಣ ಕೆಲಸಕ್ಕೆ ಹೋಗುವ ಮನಸಾಗಲಿಲ್ಲ. ಅಮ್ಮ ಬೈದು ಒತ್ತಾಯದಿಂದ ಕೆಲಸಕ್ಕೆ ಹೋಗುವಂತೆ ಮಾಡಿದಳು.
1977-ಅಮ್ಮ ಇಲ್ಲದಾದಳು:
ಅಮ್ಮನಿಗೆ ಮೊದಲು ಬಹಳ ದಿನ ಗಂಟುಮಲ್ಲಿಗೆ ಕಾಡಿತ್ತು. ಆಮೇಲೆ ಕ್ಷಯರೋಗಕ್ಕೆ ತುತ್ತಾದಳು. ನಾನು ಭ್ರಮಿತನಾಗಿ ಅಡ್ಡಾಡುವಾಗ, ಅವಳಿಗೆ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಕ್ಷಯ ಉಲ್ಭಣಗೊಂಡು ತೀರಿಕೊಂಡಳು, ನನ್ನ ಹೆತ್ತ ತಾಯಿ.
ನನ್ನ ಜೀವನದ, ಹುಟ್ಟು ಸಾವುಗಳ ಮಧ್ಯ ಸಂಘರ್ಷ ನಡೆದಿತ್ತು. ಪುನಃ ಕೆಲಸಕ್ಕೆ ಸೇರಿದಾಗ, ಲೀವ್ ಸೆಟಲ್ ಆಗಿ, ಪಗಾರ ಬರಲು ಮೂರು ತಿಂಗಳು ಹಿಡಿಯಿತು. ಈ ಮಧ್ಯ ತಾಯಿಯನ್ನು ಕಳೆದುಕೊಂಡೆ. ಹೆಂಡತಿ ಒಂದು ಹೆಣ್ಣು ಮಗುವಿಗೆ ಜನ್ಮಕೊಟ್ಟು, ತಾಯಿಯ ಮನೆಯಲ್ಲಿಯೇ ಇದ್ದಳು.
ಪಗಾರ ಆರಂಭವಾದ ಮೇಲೆ ಒಂದು ಚಿಕ್ಕ ಕೋಣೆ ಬಾಡಿಗೆಗೆ ಪಡೆದು ಪುನರ್ಜಿವನ ಆರಂಭಿಸಿದೆ. ಬಳಗದವರು ನನ್ನ ಹೆಂಡತಿಯ ಊರಿಗೆ ಹೋಗಿ, ಅವಳನ್ನು ನನ್ನಲ್ಲಿಗೆ ಕಳಿಸುವಂತೆ ಒತ್ತಾಯ ಮಾಡಿದರು.
-----------------------------------------
1977-ಹೆಂಡತಿಯ ಆಗಮನ, ಮುಂಗಾರು ಮಳೆಯ ಮುನ್ನ.
1978-ಮಗನ ಜನನ
1979- ಪಿ. ಐ. ಪರಿಕ್ಷೆಯಲ್ಲಿ ಜಯಭೇರಿ.
1980-1981- ಸಂಡೂರಿನಲ್ಲಿ ಮಕ್ಕಳೊಂದಿಗೆ ವಾಸ.
1982-ಜೆ. ಇ. ಪರೀಕ್ಷೆಯಲ್ಲಿ ಜಯಭೇರಿ.
1984- ರಾಯಚೂರಿನಲ್ಲಿ ಜೀವನ ಆರಂಭ.
ಮೂವರು ಮಕ್ಕಳು, ಒಬ್ಬರು ಶಾಲೆಗೆ ಹೋಗುವರು.
1988-ಜೀವನ ಸಂಘರ್ಷ ಎದುರಾಯಿತು. ತಿಳಿಯದ ಹೆಂಡತಿ, ಹಟಮಾರಿ ಅತ್ತೆ ಸೇರಿ ಮನೆ ಒಡೆಯುವ ಕೆಲಸ ಮಾಡಿದರು.
ಈಗ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಎಲ್ಲರೂ ದೂರವಾದರು. ನಾನು ಒಂಟಿಯಾದೆನು. ಸಂಧಾನದಿಂದ ಮಕ್ಕಳು ಹಿಂದಿರುಗುವಾಗ, ಶಾಲೆ ಆರಂಭವಾಗಿ ಎರಡು ತಿಂಗಳಾಗಿತ್ತು. ಸುನಿತಾ ಮನೆಯಲ್ಲಿಯೇ ಉಳಿದಳು. ಹೈಸ್ಕೂಲಿಗೆ ಸೇರುವ ದಿನಗಳು ಮುಗಿದಿದ್ದವು.
1989- ಸುನಿತಾ ಹೈಸ್ಕೂಲಿಗೆ ಸೇರಿದಳು.
1994- ಬೇಸಿಗೆಯಲ್ಲಿ ಸುನಿತಾಳ ಮದುವೆ ಮಾಡಿದೆವು.
1995-ಪಿಂಕಿಯ ಜನನ.
1996- ಬೀದರಕ್ಕೆ ವರ್ಗವಾದದ್ದು.
ಮಗ[ರವಿಂದ್ರ] ಪಿ.ಯು.ಸಿ. ಮುಗಿಸದ್ದನು. ಸವಿತಾ ಎಂಟನೆ ಮುಗಿಸಿದ್ದಳು, ರಾಜು ನಾಲ್ಕನೇ ಪಾಸಾಗಿದ್ದ. ಅವರ ಮುಂದಿನ ವಿದ್ಯಾಭ್ಯಾಸ ಬೀದರಿನಲ್ಲಿ ಆರಂಭವಾಯಿತು.
ಇಸವಿ 2000ದ ಹೊತ್ತಿಗೆ; ರವಿಂದ್ರ ಬಿ.ಎಸ್ಸಿ. ಮುಗಿಸಿದ. ಬೀದರ ನಗರದಲ್ಲಿ ಸ್ವಂತ ಮನೆ ಕಟ್ಟುವ ಕೆಲಸದಲ್ಲಿ ನೆರವಾದ. ಸವಿತಾ ಪಿ.ಯು.ಸಿ. ಮುಗಿಸಿದಳು. ನಂತರ ಅವಳು ಭಾಲ್ಕಿಯಲ್ಲಿ ಬಿ.ಇ. ಗೆ ಸೇರಿಕೊಂಟಳು. ಮನೆ ಆರ್ಸಿಸಿ ಕೆಲಸ ಮುಗಿದ ನಂತರ ರವಿಂದ್ರ ಎಮ್ ಎಸ್ಸಿ ಕಲಿಯಲು ಕಲಬುರಗಿಗೆ ತೆರಳಿದನು.
2004-ರವಿಂದ್ರ ಕೆಲಸ ಹುಡುಕಲು ಬೆಂಗಳೂರಿಗೆ ತೆರಳಿದ. ರಾಜೇಂದ್ರ ಇಂಜಿನಿಯರಿಂಗ ಕಲಿಯಲು ಬೆಂಗಳೂರಿಗೆ ಹೋದನು. 2005ರಲ್ಲಿ ಸವಿತಾ ಪ್ರಾಜೆಕ್ಟ ಮಾಡಲು ಬೆಂಗಳೂರಿಗೆ ಹೋದಳು.
2007ರಲ್ಲಿ ಸವಿತಾ ಇನ್ಫೋಸಿಸ್‍ನಲ್ಲಿ ಕೆಲಸಕ್ಕೆ ಸೀರಿಕೊಂಡಳು. ನವೆಂಬರ್‍ನಲ್ಲಿ ಅವಳ ಮೊದಲ ಸಂಬಳ ನನ್ನ ಕೈಸೇರಿತು. ಆನಂದಭಾಸ್ಪ ಉಕ್ಕಿಬಂತು. ಮೊಟ್ಟಮೊದಲಿಗೆ ಸಂಸಾರದ ಭಾರ ಸ್ವಲ್ಪ ಕಡಿಮೆ ಅನಿಸಿತು, ಅಪ್ಪನನ್ನು ಕಳೆದುಕೊಂಡಾದಮೇಲೆ.
2008ರಲ್ಲಿ ರಾಜೇಂದ್ರನು ಸಹ ಕೆಲಸಕ್ಕೆ ಸೇರಿಕೊಂಡನು.
ನಾನು ಫೆಬ್ರುವರಿ 2009ರಲ್ಲಿ ಸ್ವಯಿಚ್ಚೆಯಿಂದ ಕೆಲಸದಿಂದ ನಿವ್ರತ್ತಿ ಪಡೆದೆನು.
ನವೆಂಬರ್ 2009ರಲ್ಲಿ ಸವಿತಾಳ ಮದುವೆ ಬೀದರಿನಲ್ಲಿ ವೈಭವದಿ ನೆರವೇರಿತು.
ಆಕ್ಟೋಬರ್ 2010ರಲ್ಲಿ ರವಿಂದ್ರನ ಮದುವೆ ಕುಂದಾಪುರದಲ್ಲಿ ವಿಜ್ರಂಭಣೆಯಿಂದ ಜರುಗಿತು.
ಜೂನ್ 2012ರಲ್ಲಿ ಪಿಂಚಣಿ ಹಣ ಬಳಸಿ, ಸ್ವಗಾಮದಲ್ಲಿ ಐದು ಎಕರೆ ಭೂಮಿ ಖರೀದಿ ಮಾಡಿದೆ. ಸಂಸಾರ ಭಾರದಿಂದ ಮುಕ್ತನಾದೆ.