Thursday, 17 November 2022
Wednesday, 20 July 2022
Monday, 27 June 2022
Sunday, 26 June 2022
Saturday, 25 June 2022
Thursday, 23 June 2022
Saturday, 9 April 2022
ರಾಸಾಯನ ಶಾಸ್ತ್ರದ ಇತಿಹಾಸ
ರಾಸಾಯನ ಶಾಸ್ತ್ರದ ಇತಿಹಾಸ
ಲೇಖಕರ ಪರಿಚಯ :
ವಿಜ್ಞಾನದತ್ತ ನನ್ನ ಒಲವು:
೧೯೯೪ರಲ್ಲಿ ಒಮ್ಮೆ, ನಾನು ರಾಯಚೂರಿನಲ್ಲಿ ಸೇವೆಯಲ್ಲಿರುವಾಗ ದೊಡ್ಡ ಪ್ರಮಾಣದ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅಲ್ಲಿ ಜಿ.ಟಿ. ನಾರಾಯಣರಾಯರಿಂದ ಕನ್ನಡದಲ್ಲಿ ಬರೆದ ವೈಜ್ಞಾನಿಕ ಮನೋಧರ್ಮ ಎನ್ನುವ ಪುಸ್ತಕ ಒಂದು ಕೊಂಡುಕೊಂಡೆ. ಆಗಾಗ್ಗೆ ಕೆಲಸದಿಂದ ಬಿಡುವಿದ್ದಾಗ ಪುಟಗಳನ್ನು ತಿರುವಿ ಅದನ್ನು ಓದುತ್ತಿದ್ದೆ. ನಾನು ಅರ್ಧ ಪುಸ್ತಕ ಓದಿದ ಮೇಲೆ ನನಗೆ ಗಣಿತಕ್ಕೂ, ವಿಜ್ಞಾನಕ್ಕೂ ಇರುವ ನಿಕಟ ನಂಟಿನ ಅರಿವಾಯಿತು. ವಿಜ್ಞಾನದ ಸಮಸ್ಸೆ ಬಿಡಿಸಲು ಗಣಿತದ ಗುಟ್ಟು ರಟ್ಟಾಯಿತು. ಇದನ್ನು ಬಳಸಿ ಸೂರ್ಯನ ವ್ಯಾಸ ಕಂಡುಹಿಡಿಯಲು ಪ್ರಯತ್ನಿಸಿದೆ. ಸೂರ್ಯನ ಸುತ್ತ ಭೂಮಿಯ ಪರಿಭ್ರಮಣದ ಸರಾಸರಿ ವೇಗ ಲೆಕ್ಕಹಾಕಿದೆ. ಕುತೂಹಲಕ್ಕೆ ನನ್ನ ಉತ್ತರಗಳು, ಸರಿಯಾಗಿಯೇ ಇದ್ದವು.
ಭೂಮಿಯಿಂದ ಎಷ್ಟು ಎತ್ತರದಲ್ಲಿ ಮೋಡಗಳು ಹುಟ್ಟಿಕೊಳ್ಳುತ್ತವೆ? ಎನ್ನುವ ಪ್ರಶ್ನೆ ಕಾಡಿತು. ಅದನ್ನು ಬಿಡಿಸಿದೆ. ಸರಾಸರಿ ಉತ್ತರ 5 ರಿಂದ 6 ಕಿಲೋಮೀಟರ್ ಎಂದು ತಿಳಿಯಿತು. ಹೀಗೆ ವಿಜ್ಞಾನ ಪ್ರಪಂಚಕ್ಕೆ ನಾನು ಹತ್ತಿರವಾಗುತ್ತಾ ನಡೆದೆ. ಪದವಿಯಲ್ಲಿ ಓದುವಾಗ ರಸಾಯನ ಶಾಸ್ತ್ರ ಚೆನ್ನಾಗಿ ಅರ್ಥವಾಗಿರಲಿಲ್ಲ. ಮುಂದೊಮ್ಮೆ, ಸಸ್ಯಗಳು ಸೂರ್ಯನ ಬೆಳಕಿನಲ್ಲಿ ಸಕ್ಕರೆ ತಯ್ಯಾರಿಸುವ ಕ್ರಮ, ನನ್ನ ಕುತೂಹಲ ಕೆರಳಿಸಿತು. ಇದೇ ಧಾಟಿಯಲ್ಲಿ ಮುನ್ನುಗ್ಗಿ ರಸಾಯನ ಶಾಸ್ತ್ರದತ್ತ ನನ್ನ ಒಲವು ಹೆಚ್ಚಿತು. ವಿವಿಧ ಪರಮಾಣುಗಳ ಸಹವೇಲೆನ್ಸಿ ಬಂಧ ಉಂಟಾಗುವುದನ್ನ ಮತ್ತು ಇದಕ್ಕೆ ಸಂಭಂದಿಸಿದಂತೆ ಶಕ್ತಿಯಲ್ಲಿ ಆಗುವ ಬದಲಾವಣೆಗಳನ್ನು ಅರ್ಥಮಾಡಿಕೊಂಡೆ. ಕಾಲದೊಂದಿಗೆ ರಸಾಯನ ಶಾಸ್ತ್ರದಲ್ಲಿ ಆದ ಬೆಳವಣಿಗೆಯ ಅಧ್ಯಯನ ಮಾಡಿದೆ. ಹೀಗೆ ನಾನೊಬ್ಬ ರಸಾಯನ ಶಾಸ್ತ್ರದ ಹವ್ಯಾಸಿಯಾದೆ. ಮೂಲಧಾತುಗಳ ಪರಮಾಣು ರಾಶಿಯನ್ನು ಆಧರಿಸಿ, ಸೈಬೀರಿಯಾದ ವಿಜ್ಞಾನಿ ಮೆಂಡೆಲಿವರು ಧಾತುಗಳ ಆವರ್ತಕ ಕೋಷ್ಟಕ ರಚನೆ ಮಾಡಿದನ್ನು ಅಭ್ಯಾಸ ಮಾಡಿದೆ. ಹೀಗೆ ವಿಜ್ಞಾನ ಲೋಕದಲ್ಲಿ ನನ್ನ ಪಯಣ ಮುಂದೆ ಮುಂದೆ ಸಾಗಿತು. ಆವರ್ತಕ ಕೋಷ್ಟಕ ಇಡೀ ವಿಶ್ವಕ್ಕೆ ಅನ್ವಯ ಎಂದು ತಿಳಿದಾಗ, ಬಲು ಆಶ್ಚರ್ಯ ಹಾಗು ಸಂತೋಷದ ಭಾವನೆ ಮೂಡಿತು.
-ಎಚ್. ಕೆ. ತುಕಾರಾಮ
ರಸಾಯನ ಶಾಸ್ತ್ರದ ಇತಿಹಾಸ :
ರಾಸಾಯನ ಶಾಸ್ತ್ರ ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿದೆ. ೧೭ನೇ ಶತಮಾನದಿಂದ ೨೦ನೇ ಶತಮಾನದ ವರೆಗೆ. ಈಗ ನಾವಿರುವುದು ೨೧ನೇ ಶತಮಾನದಲ್ಲಿ.
ಈ ಜಗತ್ತು ಪಂಚಮಹಾಭೂತಗಳಿಂದ ಆಗಿದೆ ಎಂದರು ಹಿಂದಿನವರು. ಆಕಾಶ , ಅಗ್ನಿ , ವಾಯು , ಜಲ ಮತ್ತು ಮಣ್ಣು ; ಈ ಪಂಚಮಹಾಭೂತಗಳು.
ವಸ್ತು , ಶಕ್ತಿ , ಆಕಾಶ ಮತ್ತು ಕಾಲ ಎಂದು ಇಂದಿನವರು ವರ್ಗಿಕರಣ ಮಾಡಿದರು . ವಾಯು, ಜಲ, ಮತ್ತು ಮಣ್ಣನ್ನು ಒಟ್ಟಿಗೆ ದ್ರವ್ಯ ಎಂದರು. ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ. ಅದಕ್ಕೆ ದ್ರವ್ಯರಾಶಿ ಇದೆ.
೧೬೬೧ರಲ್ಲಿ ರಾಬರ್ಟ ಬಾಯ್ಲ್ ಧಾತುವಿನ ಪರಿಕಲ್ಪನೆ
ನಿರೂಪಿಸಿದನು. ಈತನು ಆಮ್ಲ ಮತ್ತು ಪ್ರತ್ಯಾಮ್ಲಗಳ ವಿವರ ನೀಡಿದನು. ಈತನು ರಾಯಲ್
ಸೊಸೈಟಿಯ ಅಧ್ಯಕ್ಷನಾಗಿದ್ದ.
ಈತನು ಗಾಳಿಯ ಗುಣಗಳು ಅಧ್ಯಯನ ಮಾಡಿ, ಒಂದು ನಿರ್ದಿಷ್ಟ ರಾಶಿಯ ಅನಿಲದ ಗಾತ್ರ, ಒತ್ತಡ, ಹಾಗೂ ಅದರ ಉಷ್ಣತೆಯ ಸಂಬಂಧದ ನಿಯಮವನ್ನು ನಿರೂಪಿಸಿದನು. PV = RT
ಒಂದೇ ಪ್ರಕಾರದ ಮೂಲ ಕಣಗಳಿಂದ ಆದ ದ್ರವ್ಯವನ್ನು ಧಾತು ಅಥವಾ ಮೂಲವಸ್ತು ಎಂದರು. ಒಂದು ಧಾತುವಿನ ಅತಿಸಣ್ಣ ಕಣಕ್ಕೆ ಪರಮಾಣು ಎಂದರು. ಒಂದೇ ಪ್ರಕಾರದ ಪರಮಾಣುಗಳಿಂದ ಆದ ವಸ್ತುವೇ ಧಾತು. ಧಾತುವು ಅನಿಲ, ದ್ರವ, ಅಥವಾ ಘನ ರೂಪದಲ್ಲಿ ಇರಬಹುದಾಗಿದೆ. ಮೂಲಧಾತುಗಳನ್ನು ಲೋಹಗಳು ಮತ್ತು ಅಲೋಹಗಳು ಎಂದು ವರ್ಗಿಕರಿಸುತ್ತಾರೆ.
ರಸಾಯನಶಾಸ್ತ್ರವು ದ್ರವ್ಯರಾಶಿಯ ಸ್ವಭಾವ, ಗುಣಗಳು ಮತ್ತು ಅದರ ರಚನೆ ಹಾಗೂ ಅದು ಹೇಗೆ ಬದಲಾಗುತ್ತದೆ ಎಂದು ಅಧ್ಯಯನ ಮಾಡುತ್ತದೆ. ರಸಾಯನಶಾಸ್ತ್ರವು ಮುಖ್ಯವಾಗಿ ಪರಮಾಣುಗಳು ಮತ್ತು ಅಣುಗಳು ಮತ್ತು ಅವುಗಳ ಪರಸ್ಪರ ಕ್ರಿಯೆಗಳು ಹಾಗೂ ಪರಿವರ್ತನೆಗಳಿಗೆ ಸಂಬಂಧಿಸಿದೆ.
ಕ್ರಿ ಪೂ 5000 ವರುಷಗಳಷ್ಟು ಹಿಂದೆಯೆ ಮಾನವ, ನಿಸರ್ಗದಲ್ಲಿ ಸಾಕ್ಷೇಪಿಕವಾಗಿ ಶುದ್ಧ ರೂಪದಲ್ಲಿ ದೊರೆಯುವ ಬಂಗಾರ, ಬೆಳ್ಳಿ ಮತ್ತು ತಾಮ್ರಗಳನ್ನು ಬಳಸತೊಡಗಿದ. ಮತ್ತು ಇಂತಹ ಬಳಕೆಯೇ ಎರಡು ಸಾವಿರ ವರುಷಗಳ ನಂತರದಲ್ಲಿ ಕಂಚಿನ ಯುಗಕ್ಕೆ ನಾಂದಿಯಾಯಿತು.
ಕ್ರಿಸ್ತಪೂರ್ವ
೩೫೦೦ಕಿಂತ ಮೊದಲಿನಿಂದಲೂ , ಲೋಹ ಶೋಧಕರು, ತಾಮ್ರದ ಅದಿರಿನಿಂದ ತಾಮ್ರವನ್ನು
ಬೇರ್ಪಡಿಸುವ ಕಲೆ ಅರಿತಿದ್ದರು. ತಾಮ್ರದ ಅದಿರಿನ ಕಲ್ಲನ್ನು ಕರಗುವ ವರೆಗೆ ಕಾಯಿಸಿ
ತಾಮ್ರದ ಲೋಹ ಬೇರ್ಪಡಿಸುತ್ತಿದ್ದರು.
೧೭೩೫ರಲ್ಲಿ ಗಣಿಗಾರಿಕೆಯ
ಗುಡ್ಡಗಾಡಿನಲ್ಲಿ ತಾಮ್ರದ ಅದಿರಿನಂತೆ ಇರುವ ವಸ್ತುವನ್ನು ಕಂಡು ಅದು ತಾಮ್ರದ ಅದಿರೆಂದು
ಭಾವಿಸಿ, ತಾಮ್ರ ಬೇರ್ಪಡಿಸಲು ಅದಿರನ್ನು ಚೆನ್ನಾಗಿ ಕಾಯಿಸಿದರು. ಆದರೆ ಅದರಿಂದ
ತಾಮ್ರದ ಲೋಹ ಹೊರಬರಲಿಲ್ಲ. ಬದಲಿಗೆ ಅದೊಂದು ಹೊಸ ಲೋಹ ಆಗಿತ್ತು. ಅದನ್ನು ಕೋಬಾಲ್ಟ್ ಲೋಹ ಎಂದು ಹೆಸರಿಸಿದರು.
ಕೊಬಾಲ್ಟ್ ಒಂದು ಬೆಳ್ಳಿಯಂತೆ ಬಿಳಿ ಬಣ್ಣದ ಮೂಲಧಾತು ಲೋಹವಾಗಿದೆ. ಇದನ್ನು Co ಚಿಹ್ನೆಯಿಂದ ಗುರುತಿಸಲಾಗಿದೆ ಮತ್ತು ಇದರ ಪರಮಾಣು ಸಂಖ್ಯೆ ೨೭.
ಇದು ಗುಣಲಕ್ಷಣಗಳಲ್ಲಿ ಕಬ್ಬಿಣ ಹಾಗೂ ನಿಕಲ್ ಲೋಹಗಳನ್ನು ಹೋಲುತ್ತದೆ. ಅವುಗಳಂತೆ ಇದು ಕೂಡಾ ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಇದನ್ನು ಸ್ವೀಡನ್ ದೇಶದ ಜಾರ್ಜ್ ಬ್ರಾಂಡ್ (Georg Brandt) ಎಂಬವರು ೧೭೩೭ರಲ್ಲಿ ಕಂಡುಹಿಡಿದರು.
೧೭೫೧ರಲ್ಲಿ ಇಂತಹದೇ ಇನ್ನೊಂದು ತಾಮ್ರದ ಗಣಿಯಲ್ಲಿ ತಾಮ್ರದ ಬದಲಿಗೆ ಇನ್ನೊಂದು ಹೊಸ ಬಿಳಿ ಬಣ್ಣದ ಕಠಿಣ ಲೋಹ ಹೊರಬಿದ್ದಿತು. ಇದನ್ನು ನಿಕೆಲ್ ಲೋಹ ಎಂದು ಹೆಸರಿಸಿದರು.
ನಿಕಲ್ ಒಂದು ಬಿಳಿ ಬಣ್ಣದ ಮೂಲವಸ್ತು. ಇದು ಒಂದು ಲೋಹ. ಪ್ರಾಚೀನರಿಗೆ ಇದರ ಮಿಶ್ರ ಲೋಹಗಳ ಉಪಯೋಗದ ಬಗ್ಗೆ ತಿಳಿದಿತ್ತಾದರೂ ಇದನ್ನು ೧೭೫೧ರಲ್ಲಿ ಸ್ವೀಡನ್ ದೇಶದ ಅಕ್ಸೆಲ್ ಕ್ರಾನ್ಸ್ಟೆಡ್ಟ್ (Axel Cronstedt) ಎಂಬ ವಿಜ್ಞಾನಿ ಮಿಶ್ರ ಲೋಹಗಳಿಂದ ಬೇರ್ಪಡಿಸಿದರು. ಇದು ಬಹಳ ಹೊಳಪುಳ್ಳ ಲೋಹವಾದುದರಿಂದ ಹಲವಾರು ಮಿಶ್ರಲೋಹಗಳ ಉತ್ಪಾದನೆಯಲ್ಲಿ ಉಪಯೋಗದಲ್ಲಿದೆ. ಇದು ಮುದ್ರಣ, ನಾಣ್ಯಗಳ ತಯಾರಿಕೆ, ಕೈಗಾರಿಕೆಗಳಲ್ಲಿ ರಾಸಯನಿಕ ವೇಗವರ್ಧಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ.
೧೮ನೇಯ ಶತಮಾನದಲ್ಲಿ ಜಲಜನಕ , ಆಮ್ಲಜನಕ . ಮತ್ತು ಇಂಗಾಲದ ಡೈ ಅಕ್ಸಯಿಡ್ ಎನ್ನುವ ಅನಿಲಗಳ ಶೋಧ ಮತ್ತು ಅವುಗಳ ಗುಣಗಳ ಅಧ್ಯಯನ ನಡೆಯಿತು.
೧೭೫೪ರಲ್ಲಿ ಜೋಸೆಫ್ ಬ್ಲ್ಯಾಕ್ ಎನ್ನುವ ಉಪನ್ಯಾಸಕನು ಸುಣ್ಣದ ಕಲ್ಲನ್ನು ಹೆಚ್ಚು ಶಾಖದಲ್ಲಿ ಕಾಯಿಸಿ, ಅದರಿಂದ ಇಂಗಾಲದ ಡೈ ಅಕ್ಸಯಿಡ್ ಅನಿಲ ಹೊರಸೂಸುವುದನ್ನು ಗಮನಿಸಿದನು. ಈ ಅನಿಲವು ಗಾಳಿಗಿಂತ ಭಾರವಾಗಿದ್ದು, ದಹನಾನುಕೂಲಿ ಅಲ್ಲ ಎಂದು ಕಂಡುಕೊಂಡ.
ಈತನು ಮ್ಯಾಗ್ನಿಷಿಯಂ
ಲೋಹವನ್ನು ಕಂಡುಹಿಡಿದನು ಮತ್ತು ನೀರಿನ ಗುಪ್ತೋಷ್ಣವನ್ನು ವಿವರಿಸಿದನು. ೧೭೫೬ರಿಂದ ೧೦
ವರುಷಗಳ ಕಾಲ, ಈತನು ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಮತ್ತು ರಸಾಯನ
ಶಾಸ್ತ್ರದ ಪ್ರಾದ್ಯಾಪಕನಾಗಿದ್ದನು. ನಂತರ ಈತನು ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ
ಸುಮಾರು ೩೦ ವರುಷಗಳ ಕಾಲ ರಾಸಾಯನ ಶಾಸ್ತ್ರದ ಭೋದನೆ ಮಾಡಿದನು.
೧೭೬೬ರಲ್ಲಿ ಹೆನ್ರಿ ಕೆವೆಂಡಿಷ್ ಎನ್ನುವ ವಿಜ್ಞಾನಿಯು ತನ್ನ ಪ್ರಯೋಗಶಾಲೆಯಲ್ಲಿ ಲೋಹಗಳ ಮೇಲೆ ಆಮ್ಲದ ರಾಸಾಯನಿಕ ಕ್ರಿಯೆಯಿಂದ ಹೊರಸೂಸುವ, ಹಗುರವಾದ ಮತ್ತು ಉರಿಯಬಲ್ಲ ಜಲಜನಕ ಅನಿಲವನ್ನು ಕಂಡುಹಿಡಿದನು. ಜಲಜನಕ ಒಂದು ದೈಹ್ಯ ಅನಿಲವಾಗಿದೆ.
ಜಲಜನಕವು ಒಂದು ರಾಸಾಯನಿಕ ಮೂಲಧಾತು. ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತು. ಇದು ಅತ್ಯಂತ ಸರಳ, ಹಗುರವಾದ ಮೂಲಧಾತು. ಈ ಅನಿಲಕ್ಕೆ ಬಣ್ಣ, ರುಚಿ, ವಾಸನೆ ಯಾವುದೂ ಇಲ್ಲ. ಇದರ ಪರಮಾಣು ರಚನೆಯಲ್ಲಿ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಮಾತ್ರ ಇರುತ್ತದೆ. ಇದರ ಹೆಸರು ಗ್ರೀಕ್ ಭಾಷೆಯ hydro-gen 'ಜಲಜನಕ' ಎಂಬ ಅರ್ಥ ಕೊಡುವ ಎರಡು ಶಬ್ದಗಳಿಂದ ಬಂದಿದೆ.
೧೭೭೪ರಲ್ಲಿ ಜೊಸೆಫ್ ಪ್ರೀಸ್ಟ್ಲೆ ಪಾದರಸದ ಆಕ್ಸಯಿಡ್ ಅದಿರನ್ನು, ಪೀನಮಸೂರದ ಸಹಾಯದಿಂದ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಕಾಯಿಸಿದಾಗ, ಆಮ್ಲಜನಕ ಅನಿಲ ಬಿಡುಗಡೆ ಆಗುವುದನ್ನು ಕಂಡುಹಿಡಿದನು. ಇದು ದಹನಾನುಕೂಲಿ ಅನಿಲವಾಗಿತ್ತು. ರಾಯಲ್ ಸೊಸೈಟಿಯ ಸದಸ್ಯನಾ ಈತನು, ಒಮ್ಮೆ ಫ್ರಾನ್ಸ್ ದೇಶಕ್ಕೆ ಭೇಟಿನೀಡಿದಾಗ, ತನ್ನ ಆಮ್ಲಜನಕ ಬಿಡುಗಡೆಯ ಪ್ರಯೋಗವನ್ನು ಅಲ್ಲಿಯ ವಿಜ್ಞಾನಿಗಳಿಗೆ ವಿವರಿಸಿದನು.
ಪ್ರೀಸ್ಟ್ಲೆಯು, ಲಾವೋಸೀಯರ್‌ನಿಗೆ ತನ್ನ
ಪ್ರಯೋಗವನ್ನು ವಿವರಿಸಿದಾಗ, ಅವನಿಗೆ ಬಹುಶಹ ಗಾಳಿಯಲ್ಲಿ, ದಹನವನ್ನು ಬೆಂಬಲಿಸುವ
ಮತ್ತು ಬೆಂಬಲಿಸದ, ಎರಡು ಪ್ರಕಾರದ ಅನಿಲಗಳು ಇರಬೇಕೆಂಬ ಅನುಮಾನ ಉಂಟಾಯಿತು.
೧೭೭೮ರಲ್ಲಿ ಲಾವೋಷಿಯೆರನು ಪ್ರೀಸ್ಟ್ಲೆಯವರ ಪ್ರಯೋಗದ ಪುನರಾವರ್ತನೆಗೈದು ಆಮ್ಲಜನಕ ತಯ್ಯಾರಿಸಿ ಅದರ ಗುಣಗಳ ಅಧ್ಯಯನಗೈದು, ದಹನ ಕ್ರಿಯೆಯಲ್ಲಿ ಆಮ್ಲಜನಕದ ಪಾತ್ರವನ್ನು ವಿವರಿಸಿದನು. ಈತನು ಆಮ್ಲಜನಕ ಒಂದು ಧಾತು ಎಂದೂ, ಮತ್ತು ನಿಸರ್ಗದಲ್ಲಿ ಸಹಜವಾಗಿ ಆಮ್ಲಜನಕವು ಅನಿಲ ರೂಪದಲ್ಲಿ ಇರುತ್ತದೆ ಎಂದು ವಿವರಿಸಿದನು.
ಆಮ್ಲಜನಕವು ಕ್ರಿಯಾಶೀಲವಾಗಿದ್ದು ಅನ್ಯ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಆಕ್ಸಯಿಡಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿದನು. "ದಹನ ಎಂದರೆ ದೈಹ್ಯ ವಸ್ತುವು ಆಮ್ಲಜನಕ ದೊಂದಿಗೆ ಸೇರಿಕೊಳ್ಳುವುದು" ಎಂದು ಅರ್ಥೈಸಿದನು.
ಮ್ಯಾಗ್ನಿಷಿಯಂ ಲೋಹವು ಗಾಳಿಯಲ್ಲಿ ಉರಿದಾಗ, ಅದು ಆಮ್ಲಜನಕದೊಂದಿಗೆ ಸೇರಿ, ಮ್ಯಾಗ್ನಿಷಿಯಂ ಅಕ್ಸಯಿಡ್ ಉಂಟಾಗುತ್ತದೆ.
ಆಮ್ಲಜನಕ (Oxygen) ಅನಿಲ ರೂಪದ ಒಂದು ಮೂಲಧಾತು. ಇದರ ಪರಮಾಣು ಸಂಖ್ಯೆ ೮. ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು. ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು. ವಾತಾವರಣದ ೧/೫ ರಷ್ಟು, ಭೂಪದರ(Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು, ಖನಿಜ ಹಾಗೂ ಶಿಲೆಗಳ ತೂಕದ ಅರ್ದದಷ್ಟು, ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ. ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ, ರುಚಿಇಲ್ಲದ, ವಾಸನೆ ಇಲ್ಲದ ಅನಿಲ. ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ. ಸಾಮಾನ್ಯವಾಗಿ ೨ ಪರಮಾಣು ಸೇರಿಕೊಂಡು ಇರುತ್ತವೆ. ಮೂರು ಪರಮಾಣುಗಳು ಸೇರಿ ಇದ್ದಾಗ ಓಜೋನ್ಎಂದು ಕರೆಯಲ್ಪಡುತ್ತದೆ.ಇದು ಸೂರ್ಯನ ನೇರಳಾತೀತ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುವುದು.ಈ ಅನಿಲವು ದಹನ ಕ್ರಿಯೆಯನ್ನು ಬೆಂಬಲಿಸುವುದು.
ನಾವು ಉಸಿರಾಡುವ ಗಾಳಿಯಲ್ಲಿ ೨೧% ಆಮ್ಲಜನಕ, ೭೮% ಸಾರಜನಕ ಅನಿಲ ಇದೆ. ಉಳಿದ ಸ್ವಲ್ಪ ಭಾಗವು ಜಡ ಅನಿಲಗಳದ್ದು. ಗಾಳಿಯಲ್ಲಿ ನೀರಾವಿಯ ಪ್ರಮಾಣ ಸದಾ ಬದಲಾಗುತ್ತಇರುತ್ತದೆ.
ಲಾವೋಷಿಯರನು, ಗಂಧಕ ಒಂದು ಮೂಲವಸ್ತು ಎಂದು ತೀರ್ಮಾನಿಸಿದನು. ರಾಸಾಯನಿಕ ತುಲಾಭಾರ ಬಳಸಿ ಧಾತುಗಳ ಪರಿಮಾಣಾತ್ಮಕ ರಸಾಯನ ಶಾಸ್ತ್ರಕ್ಕೆ ಅಡಿಪಾಯ ಹಾಕಿದನು. ಈತನು ರಸಾಯನ ಶಾಸ್ತ್ರಕ್ಕೆ ಹೊಸ ಶಬ್ದಾವಳಿ ರಚಿಸಿದನು.
೧೭೮೯ರಲ್ಲಿ ಲಾವೋಷಿಯರನು ಮೊದಲಬಾರಿಗೆ, ಅಂದಿನವರೆಗೆ ತಿಳಿದಿರುವ ೨೩ ವಿವಿಧ ಪ್ರಕಾರದ ಧಾತುಗಳ ಪಟ್ಟಿ ಮಾಡಿದನು . ಈತನು ರಾಸಾಯನಿಕ ಬದಲಾವಣೆಯಲ್ಲಿ ಭಾಗವಹಿಸುವ ಧಾತುಗಳ ರಾಶಿ ಸಂರಕ್ಚೆಣೆಯ ನಿಯಮವನ್ನು ವಿವರಿಸಿದನು. ಈತನನ್ನು ರಸಾಯನ ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ.
೧೭೯೪ರ ಫ್ರೆಂಚ್ ಮಹಾಕ್ರಾಂತಿಯಲ್ಲಿ ಮಹಾನ್ ವಿಜ್ಞಾನಿ ಲಾವೊಸಿಯರನು ಕೊಲೆಯಾದನು.
೧೭೮೯ ರಲ್ಲಿ ಲೂಯಿಸ್ ಪ್ರೌಸ್ಟ್ ಎನ್ನುವ ವಿಜ್ಞಾನಿಯು ಎರಡು ಭಿನ್ನ ಭಿನ್ನ ಧಾತುಗಳು ರಾಸಾಯನಿಕವಾಗಿ ಸಂಯೋಗ ಹೊಂದುವಾಗ, ಅವು ಒಂದು ನಿರ್ದಿಷ್ಟ ರಾಶಿಯ ಅನುಪಾತದಲ್ಲಿ ಮಾತ್ರ ಸೇರಿಕೊಳ್ಳುತ್ತವೆ ಎಂದು ನಿರೂಪಿಸಿದರು. ಪ್ರೌಸ್ಟ್ ೧೭೯೯ರಲ್ಲಿ ಪ್ರಕಟಿಸಿದ ಪ್ರಬಂಧದಲ್ಲಿ ತಾಮ್ರವು ಆಮ್ಲಜನಕದೊಂದಿಗೆ ಯಾವಾಗಲೂ ನಿರ್ದಿಷ್ಟ ಅನುಪಾತಲ್ಲಿಯೇ ಸೇರುತ್ತದೆ ಎಂಬ ನಿರ್ಣಕ್ಕೆ ಬಂದನು.
ಅಂದು ಇದ್ದ ಸಮಸ್ಯೆ ಎಂದರೆ ಹಲವು ಮೂಲ ಪದಾರ್ಥಗಳು ಸೇರಿ ಒಂದಕ್ಕಿಂತ ಹೆಚ್ಚು ಪ್ರಕಾರದ ಸಂಯುಕ್ತಗಳಾಗುವುದು. ಡಾಲ್ಟನ್‌ನ ಪರಮಾಣು ಸಿದ್ಧಾಂತವು, ಎಲ್ಲಾ ಪದಾರ್ಥಗಳು ಅವಿಭಾಜ್ಯವಾದ, ಕಣ್ಣಿಗೆ ಕಾಣದ, ಪರಮಾಣುಗಳನ್ನು ಹೊಂದಿರುತ್ತವೆ ಎಂದು ಹೇಳುತ್ತಿತ್ತು. ಇದು ಎರಡು ಮೂಲ ಧಾತುಗಳು ಒಂದಕ್ಕಿಂತ ಹೆಚ್ಚು ಅನುಪಾತಗಳಲ್ಲಿ ಸಂಯೋಜನೆಗೊಳ್ಳುವ ಸಾಧ್ಯತೆಯನ್ನು ವಿವರಿಸುತ್ತಿತ್ತು. ಇದನ್ನು ಬಹು ಅನುಪಾತ ಸಂಯೋಜನೆ ನಿಯಮ (ಲಾ ಆಫ್ ಮಲ್ಟಿಪಲ್ ಪ್ರಪೋರ್ಶನ್) ಎಂದು ಕರೆಯಲಾಗಿದೆ.
೧೭೯೯ರಲ್ಲಿ ಇಟಲಿಯ ಭೌತಶಾಸ್ತ್ರ ಪ್ರಾಧ್ಯಾಪಕರಾದ ಅಲೆಸ್ಯಾಂಡ್ರೋ ವೋಲ್ಟಾರವರು ವಿದ್ಯುತ್ ಕೋಶವನ್ನು ಆವಿಸ್ಕರಿಸಿದರು . Voltaic Pile. ವಿದ್ಯುತ್ ಕೋಶದಲ್ಲಿ ರಾಸಾಯನಿಕ ಬದಲಾವಣೆಯಿಂದ ವಿದ್ಯುತ್ ಶಕ್ತಿಯು ಬಿಡುಗಡೆಯಾಗುವುದನ್ನು ತೋರಿಸಿದನು.
೧೮೦೦ರಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಾಹ ಹರಿಸಿ, ನೀರನ್ನು ಆಮ್ಲಜನಕ ಮತ್ತು ಜಲಜನಕ ಅನಿಲಗಳಾಗಿ ವಿಭಜಿಸಿದರು. ಇದರಿಂದ ನೀರು ಮೂಲವಸ್ತು ಅಲ್ಲ, ಬದಲಿಗೆ ಇದೊಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು. ಅಂದಿನ ಸಾಮಾನ್ಯ ಜನರಿಗೆ ಇದು ನಂಬಲಾಗಲಿಲ್ಲ. ಅವರು ನೀರು ಒಂದು ಮೂಲವಸ್ತು ಅಂದುಕೊಂಡಿದ್ದರು.
ಈ ಪ್ರಯೋಗದಲ್ಲಿ ಹೊರಸೂಸಿದ ಜಲಜನಕ ಮತ್ತು ಆಮ್ಲಜನಕ ಅನಿಲಗಳ ಗಾತ್ರದ ಅನುಪಾತ ೨:೧ ಇರುತ್ತದೆ. ಅಂದರೆ ಎರಡು ವಿಭಿನ್ನ ಅನಿಲಗಳು ಒಂದು ನಿರ್ದಿಷ್ಟ ಗಾತ್ರದ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತು ರೂಪಗೊಳ್ಳುತ್ತದೆ ಎಂದು ಸಿದ್ದವಾಯಿತು. ಇದನ್ನು ಗೇ-ಲುಸಾಕರ ನಿಯಮ ಎನ್ನುವರು.
ನೀರು
ವಿಭಜಿಸುವ ರಾಸಾಯನಿಕ ಕ್ರಿಯೆಗೆ ಹೊರಗಿನಿಂದ ವಿದ್ಯುತ್ ಶಕ್ತಿ ಒದಗಿಸಬೇಕಾಯಿತು.
ಇದಕ್ಕೆ ವಿರುದ್ಧವಾಗಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ರಾಸಾಯನಿಕವಾಗಿ ಸೇರಿ, ನೀರು
ಉಂಟಾಗುವ ಬದಲಾವಣೆಯಲ್ಲಿ, ಉಷ್ಣಶಕ್ತಿ ಹೊರಗೆ ಹಾಕಲಾಗುತ್ತದೆ. ಹೀಗೆ ಹೊರಗಿನಿಂದ ಶಕ್ತಿಯನ್ನು ಪಡೆದುಕೊಳ್ಳುವ, ಅಥವಾ ತನ್ನಲ್ಲಿಯ ಶಕ್ತಿಯನ್ನು ಹೊರಚೆಲ್ಲುವ, ಎರಡು ಪ್ರಕಾರದ ರಾಸಾಯನಿಕ ಕ್ರಿಯೆಗಳಿರುತ್ತವೆ. ಪರಮಾಣುಗಳ ಮಧ್ಯ ರಾಸಾಯನಿಕ ಬಂಧ ಉಂಟಾಗುವಾಗ, ದ್ರವ್ಯಗಳ ಒಳ-ಶಕ್ತಿಯ ವಿನಿಮಯವಾಗುತ್ತದೆ.
ಇಂಗಾಲದ ಡೈಆಕ್ಸಯಿಡ್ ಅನಿಲ ಮತ್ತು ನೀರು ಬಳಸಿ, ಸಸ್ಯಗಳು ಗ್ಲುಕೋಸ್ -ಸಕ್ಕರೆ ನಿರ್ಮಿಸಲು ಸೂರ್ಯನ ಶಾಖವನ್ನು ಶಕ್ತಿಯಾಗಿ ಬಳಸಿಕೊಳ್ಳುತ್ತವೆ. ಒಂದು ಇಂಗಾಲದ ಪರಮಾಣುವಿನೊಂದಿಗೆ ಇನ್ನೊಂದು ಇಂಗಾಲದ ಪರಮಾಣು ಸೇರಿಕೊಂಡು ಸಹವೇಲೆನ್ಸಿ ಬಂಧವುಂಟಾಗಲು ಹೊರಗಿನಿಂದ ಶಕ್ತಿಯನ್ನು ಒದಗಿಸಬೇಕಾಗುತ್ತದೆ.
೧೮೦೩ರಲ್ಲಿ ಡಾಲ್ಟನ್ ಎನ್ನುವ ವಿಜ್ಞಾನಿ ಧಾತುವಿನ ಪರಮಾಣು ಸಿಧಾಂತವನ್ನು ಮಂಡಿಸಿದನು. ಧಾತುಗಳು ಪರಮಾಣುಗಳೆಂಬ ಒಡೆಯಲಾಗದ ಅತಿಸಣ್ಣ ಕಣಗಳಿಂದ ಆಗಿವೆ ಎಂದು ಈತನು ವಿವರಿಸಿದನು. ವಿವಿಧ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿರುವುದಾಗಿ ತಿಳಿಸಿದನು. ಈತನು ಮೊದಲಬಾರಿಗೆ ಧಾತುಗಳ ಸಾಪೇಕ್ಷ ಪರಮಾಣು-ರಾಶಿಗಳ ಪಟ್ಟಿ ಮಾಡಿದನು.
ಕೆಲವು ಧಾತುಗಳ ಸಾಪೇಕ್ಷ ಪರಮಾಣು ರಾಶಿ ಇಲ್ಲಿದೆ :
ಜಲಜನಕ ೧, ಹೀಲಿಯಂ ೪, ಲೀಥಿಯಂ ೭, ಬೊರಾನ್ ೧೦, ಕಾರ್ಬನ್ ೧೨, ಸಾರಜನಕ ೧೪, ಆಮ್ಲಜನಕ ೧೬, ಫ್ಲೋರಿನ್ ೧೯, ನಿಯಾನ್ ೨೦, ಸೋಡಿಯಂ ೨೩, ಮೆಗ್ನೀಷಿಯಂ ೨೪, ಅಲ್ಯೂಮಿನಿಯಂ ೨೭, ಸಿಲಿಕಾನ್ ೨೮, ರಂಜಕ ೩೧, ಗಂಧಕ ೩೨, ಕ್ಲೋರಿನ್ ೩೫.೫, ಪೊಟ್ಯಾಸಿಯಂ ೩೯, ಕ್ಯಾಲ್ಸಿಯಂ ೪೦, ಕಬ್ಬಿಣ ೫೬, ತಾಮ್ರ ೬೩.೫, ಬ್ರೋಮಿನ್ ೮೦, ಬೆಳ್ಳಿ ೧೦೮, ಬೇರಿಯಂ ೧೩೭, ಪಾದರಸ ೨೦೦, ಸೀಸ ೨೦೮.
೧೮೧೧ರಲ್ಲಿ ಅವಗಾಡ್ರೋ ಎನ್ನುವ ವಿಜ್ಞಾನಿಯು ಅನಿಲಗಳ ಅಣು ರೂಪದ ಕಣಗಳ ಮೇಲೆ ಪ್ರಯೋಗಗಳನ್ನು ಮಾಡಿ; ಸಮಾನ ಗಾತ್ರದ ಯಾವುದೇ ಎರಡು ಅನಿಲಗಳು [ಸಮಾನ ಒತ್ತಡ ಹಾಗು ಸಮಾನ ಉಷ್ಣತೆಯಲ್ಲಿ] ಸಮಾನ ಪ್ರಮಾಣದ ಕಣಗಳನ್ನು ಹೊಂದಿರುತ್ತವೆ ಎಂದು ಪ್ರತಿಪಾದಿಸಿದನು.
ದ್ರವ್ಯಗಳಲ್ಲಿ ಅತ್ಯಂತ ಸೂಕ್ಷ್ಮವಾದ ಘಟಕವನ್ನು ಅಣು ಎನ್ನುತ್ತಾರೆ. ಪ್ರತಿಯೊಂದು ವಸ್ತುವನ್ನು ಅದರ ರಾಸಾಯನಿಕ ಮತ್ತು ಭೌತಿಕ ಗುಣಗಳು ನಾಶವಾಗದಂತೆ ವಿಭಾಗಿಸಬಹುದಾದ ಅತಿ ಚಿಕ್ಕದಾದ ಅಂಶವೆ ಅಣು. ಇದಕ್ಕಿಂತ ಚಿಕ್ಕದಾಗಿ ವಿಭಾಗಿಸಿದಾಗ ವಸ್ತುವು ನಾಶವಾಗಿ ಅದು ಯಾವ ಮೂಲಧಾತುಗಳಿಂದ ಮಾಡಲ್ಪಟ್ಟಿದೆಯೋ ಅವುಗಳ ಪರಮಾಣುಗಳಷ್ಟೇ ಉಳಿಯುತ್ತದೆ. ಉದಾಹರಣೆಗೆ ನೀರಿನ ಬಿಂದುವನ್ನು ವಿಭಾಗಿಸುತ್ತಾ ಹೋದರೆ ಕೊನೆಯದಾಗಿ ನೀರಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ ಅಣು ಉಳಿಯುತ್ತದೆ. ಇದನ್ನು ಇನ್ನಷ್ಟು ವಿಭಾಗಿಸಲು ಪ್ರಯತ್ನಿಸಿದರೆ ಕೇವಲ ಆಮ್ಲಜನಕ ಹಾಗೂ ಜಲಜನಕದ ಪರಮಾಣುಗಳಷ್ಟೇ ಉಳಿಯುತ್ತದೆ.
ಸಮಾನ ಗಾತ್ರದ ಜಲಜನಕ ಹಾಗು ಅಮ್ಲಜನಕ ಅನಿಲಗಳ ರಾಶಿಯು ೧:೧೬ ಅನುಪಾತದಲ್ಲಿ ಇರುತ್ತದೆ. ಜಲಜನಕದ ಪರಮಾಣುವಿನ ಸಾಪೇಕ್ಷೆರಾಶಿ ೧ ಆದರೆ ಆಮ್ಲಜನಕದ್ದು ೧೬ ಆಗುತ್ತದೆ. ನೀರಿನ ಅಣು ರಾಶಿ ೧೮ ಇರುತ್ತದೆ. ೧೮ ಗ್ರಾಂ ನೀರನ್ನು ಒಂದು ಮೋಲ್ ನೀರು ಎನ್ನುವರು. ಒಂದು ಮೋಲ್ ನೀರಿನಲ್ಲಿ ೬.೦೨೨ x ೧೦ರ ಘಾತ ೨೩ ನೀರಿನ ಕಣಗಳಿವೆ. ಇದನ್ನು ಅವಗಾಡ್ರೋ ಸಂಖ್ಯೆ ಎಂದು ಸೂಚಿಸುವರು.
ಇಂಗಾಲ ಎನ್ನುವ ಧಾತುವಿನ ರಾಶಿಸಂಖ್ಯೆ ೧೨ ಇದೆ. ೧೨ ಗ್ರಾಂ ಇಂಗಾಲವನ್ನು ಒಂದು ಮೋಲ್ ಇಂಗಾಲ ಎನ್ನುವರು. ಇದರಲ್ಲಿ ಅವಗಾಡ್ರೋ ಸಂಖ್ಯಯಷ್ಟು ಇಂಗಾಲದ ಪರಮಾಣುಗಳಿವೆ. ಅವಗಾಡ್ರೋ ಸಂಖ್ಯೆಯನ್ನು ಮೋಲ್ ಎಂದು ಕರೆಯುವ ರೂಢಿ ಇದೆ. ಸಾಮಾನ್ಯ ತಾಪ ಮತ್ತು ಒತ್ತಡದಲ್ಲಿ ಯಾವುದೇ ಪ್ರಕಾರದ ಒಂದು ಮೋಲ್ ಅನಿಲವು ೨೨.೪ ಘನ ಡಿಸಿ ಮೀಟರ್ ಗಾತ್ರ ಹೊಂದಿರುತ್ತದೆ.
೧೮೧೨ರಲ್ಲಿ ಹಂಫ್ರಿ ಡೇವಿ ಎನ್ನುವ ಲಂಡನ್ ನಗರದ ರಾಯಲ್ ಸೊಸೈಟಿಯ ವಿಜ್ಞಾನಿಯು, ಲವಣಗಳ ಮೇಲೆ ಪ್ರಬಲವಾದ ನೇರ ವಿದ್ಯುತ್ ಹರಿಸಿ, ರಾಸಾಯನಿಕ ಬದಲಾವಣೆ ಉಂಟುಮಾಡಿ, ಅಲ್ಲಿಯವರೆಗೆ ಗೊತ್ತಿರದ ಹೊಸ ಧಾತುಗಳ ಶೋಧ ಮಾಡಿದನು. ಈತನು ಪೊಟ್ಯಾಸಿಯಂ ಸೋಡಿಯಂ, ಕ್ಯಾಲ್ಸಿಯಂ ಮ್ಯಾಗ್ನೇಸಿಯಂ ಬೇರಿಯಂ ಮತ್ತು ಸ್ಟ್ರಾಂಟಿಯಂ ಧಾತುಗಳನ್ನು ಕಂಡುಹಿಡಿದನು. ಅಲ್ಲದೆ ಕ್ಲೋರಿನ್ ಅನಿಲವೂ ಕೂಡಾ ಒಂದು ಧಾತು ಎಂದು ಸಿದ್ಧಮಾಡಿದ. ಆಮ್ಲಜನಕ ಅನಿಲದಂತೆ ಕ್ಲೋರಿನ್ ಅನಿಲವೂ ಸಹ ಆಮ್ಲ ಉಂಟುಮಾಡುವುದಾಗಿ ವಿವರಿಸಿದನು. ಆಯೋಡಿನ್ ಧಾತುವನ್ನು ಬೇರ್ಪಡಿಸಿದನು. ಯುರೋಪ್ ಖಂಡದ ವಿವಿದ ನಗರಗಳಲ್ಲಿ ಸಂಚೆರಿಸಿ ಜನರಿಗೆ ರಸಾಯನ ಶಾಸ್ತ್ರದ ಪ್ರಯೋಗಗಳನ್ನು ಮಾಡಿ ತೋರಿಸಿದನು. ಕುತೂಹಲವುಳ್ಳ ಚಿಕ್ಕವಯಸ್ಸಿನ ಮೈಕಲ್ ಪ್ಯಾರಡೆ, ಈತನ ಉಪನ್ಯಾಸಗಳಿಂದ ಪ್ರಭಾವಿತನಾದನು.
೧೮೧೭ರಲ್ಲಿ ಡಾಲ್ಟನ್ನರ ಶಿಷ್ಯನಾದ ಬರ್ಜೆಲಿಯಸನ ಪ್ರಯೋಗಶಾಲೆಯಲ್ಲಿಹೊಸ ಧಾತುಗಳ ಶೋಧ; ಸೆಲೆನಿಯಮ್, ಥೋರಿಯಂ, ಲೀಥಿಯಂ ಹಾಗು ವನಾಡಿಯಂ ಧಾತುಗಳನ್ನು ಕಂಡುಹಿಡಿದರು. ಬರ್ಜೆಲಿಯಸನ ಮೂಲಧಾತುಗಳ ವಿದ್ಯುತ್ ವಿಭಜನೆಯ ಆಧಾರದ ಮೇಲೆ ಅವುಗಳನ್ನು ಧನಾತ್ಮಕ ಮತ್ತು ಋಣಾತ್ಮಕ ಧಾತುಗಳೆಂದು ವರ್ಗಿಕರಿಸಿದನು. ಪೊಟ್ಯಾಸಿಯಂ ಧಾತುವು ಧನಾತ್ಮಕವಾದರೆ, ಆಮ್ಲಜನಕ ಧಾತುವು ಋಣಾತ್ಮಕವಾದದ್ದು ಎಂದು ವಿವರಿಸಿದನು.
೧೮೨೬ ರಲ್ಲಿ ಬರ್ಜೆಲಿಯಸನೂ, ರಾಸಾಯನಿಕ ವಿದ್ಯುತ್ ವಿಭಾಜನೆಯ ಹಲವಾರು ಪ್ರಯೋಗಗಳನ್ನು ಮಾಡಿದನು. ಧಾತುಗಳನ್ನು ಧನಾತ್ಮಕ ಹಾಗು ಋಣಾತ್ಮಕ ಎಂದು ವಿಭಾಗಿಸಿದನು. ಈತನು ಧಾತುಗಳನ್ನು ಹೆಸರಿಸಿದ ಮತ್ತು ಅವುಗಳ ಹೆಸರಿನ ಮೂಲಾಕ್ಷರದಿಂದ ಧಾತುಗಳನ್ನು ಸಾಂಕೇತಿಕವಾಗಿ ಬರೆಯುವ ಕಲೆ ರೂಢಿಸಿದನು. ಇದರಿಂದ ಸಂಯುಕ್ತ ವಸ್ತುಗಳನ್ನು ಸಾಂಕೇತಿಕವಾಗಿ ಅಣು ಸೂತ್ರದ ರೂಪದಲ್ಲಿ ಬರೆಯಲು ಅನುಕೂಲವಾಯಿತು. ಈತನು ಪ್ರಯೋಗಗಳ ಮುಖಾಂತರ ಹಲವಾರು ಧಾತುಗಳ ಸಾಪೇಕ್ಷ ರಾಶಿಯನ್ನು ಕಂಡುಹಿಡಿದನು.
೧೮೨೮ರಲ್ಲಿ ವೋಹ್ಲರನು,
ಮೊದಲಬಾರಿಗೆ ನಿರವಯವ ರಾಸಾಯನ ಪದಾರ್ಥಗಳನ್ನು ಬಳಸಿ,
ಸಜೀವಿಗಳಲ್ಲಿ ಕಂಡುಬರುವ ಯೂರಿಯಾ ಎನ್ನುವ ಸಾವಯವ ಪದಾರ್ಥವನ್ನು ತಯ್ಯಾರಿಸಿದನು.
ವಿಜ್ಞಾನಿಗಳಿಗೆ,ಇದರಿಂದ ಜೀವ ಸ್ರಷ್ಠಿಯಲ್ಲಿ ಯಾವುದೇ ನಿಗೂಢ ಶಕ್ತಿಯ ಆಟ ಇಲ್ಲ ಅಂತ ಅರಿವಾಯಿತು .
೧೮೩೦ರ ವರೆಗೆ ಕಂಡುಹಿಡಿದ ಒಟ್ಟು ಧಾತುಗಳ ಸಂಖ್ಯೆ ೫೪ಕ್ಕೆ ಏರಿತು.
೧೮೩೪ರಲ್ಲಿ ಮೈಕಲ್ ಫ್ಯಾರಡೆಯವರ ನಿರೂಪಣೆ ; "ಅಯಾನಿಕ್ ದ್ರಾವಣಗಳಲ್ಲಿ ವಿದ್ಯುತ್ ಹರಿಸಿದಾಗ ಉಂಟಾಗುವ ರಾಸಾಯನಿಕ ಬದಲಾವಣೆಯು, ದ್ರಾವಣದಲ್ಲಿ ಹರಿಸಿದ ಒಟ್ಟು ವಿದ್ಯುತ್ತಿನ ಮೊತ್ತಕ್ಕೆ ಅನುರೂಪವಾಗಿ ಇರುತ್ತದೆ." ಎಂದು.
ಅವರು ವಿದ್ಯುತ್ ಬಲ ಹಾಗೂ
ಅಯಸ್ಕಂತಿಯ ಬಲಗಳ ಪರಸ್ಪರ ಸಂಬಂಧದ ಮೂಲ ಸೂತ್ರವನ್ನು ನಿರೂಪಿಸಿದರು. ಇದಕ್ಕೆ ಚಲನ ಬಲ
ಸೇರಿದಾಗ, ಡೈನಮೋ ಎನ್ನುವ ವಿದ್ಯುತ್ ಶಕ್ತಿಯ ಜನಕ ಹಾಗೂ ವಿದ್ಯುತ್ ಶಕ್ತಿ ಬಳಸಿ,
ಚಲಿಸುವ ವಿದ್ಯುತ್ ಮೋಟಾರುಗಳನ್ನು ನಿರ್ಮಿಸಿದರು. ವೀದ್ಯುತ್ ಅಯಸ್ಕಂತಿಯ ಬಲ, ಇಡೀ
ವಿಶ್ವದ ತುಂಬೆಲ್ಲ ಹರಡಿದೆ ಎಂದರು. ಮುಂದೆ ಮ್ಯಾಕ್ಸ್ ವೆಲ್ಲರು ಈ ತತ್ವಗಳಿಗೆ ಗಣಿತೀಯ
ಸಮೀಕರಣಗಳನ್ನು ರಚಿಸಿದರು. ಸೂರ್ಯನ ಬೆಳಕು ವಿದ್ಯುತ್ ಅಯಸ್ಕಂತಿಯ ರೂಪದಲ್ಲಿ ಎಲ್ಲೆಡೆ
ಹರಡುತ್ತದೆ.
೧೮೪೧ರಲ್ಲಿ ಜೆ. ಆರ್. ಮೇಯರರು, ಶಕ್ತಿ ನಿತ್ಯತೆಯ ನಿಯಮವನ್ನು ನಿರೂಪಿಸಿದರು. "ರಾಸಾಯನಿಕ ಬದಲಾವಣೆಯಲ್ಲಿ ಶಕ್ತಿಯು ನಾಶವಾಗದು ಅಥವಾ ಹೊಸದಾಗಿ ಹುಟ್ಟದು. ಶಕ್ತಿ ಕೇವಲ ರೂಪಾಂತರವಾಗಬಲ್ಲದು"ಎಂದರು ಇವರು.
೧೮೪೧ರಲ್ಲಿ ಲಂಡನ್ ಪಟ್ಟಣದಲ್ಲಿ ರಾಸಾಯನ ಶಾಸ್ತ್ರದ ಸಂಘ
ಸ್ಥಾಪನೆಗೊಂಡಿತು. ಔದ್ಯೋಗಿಕ ರಸಾಯನ ಶಾಸ್ತ್ರದ ಬೆಳವಣಿಗೆಗೆ ಇದರಿಂದ ಅನುಕೂಲವಾಯಿತು.
ಇದಕ್ಕೆ ಮುಂಚಿತವಾಗಿಯೇ ಇಂಗ್ಲೆಂಡ್ ದೇಶದಲ್ಲಿ ಮೊಟ್ಟಮೊದಲಿಗೆ, ಸಮುದ್ರದ ಉಪ್ಪಿನಿಂದ
ಸೋಡಾ ತಯ್ಯಾರಿಸುವ ಕಾರ್ಖಾನೆ ಸ್ಥಾಪನೆಯಾಗಿತ್ತು. ಸಾಬೂನು, ಕಾಗದ ಮತ್ತು ಗಾಜು
ತಯ್ಯಾರಿಕೆಗೆ ಸೋಡಾ ಬೇಕೇ ಬೇಕು. ಜಗತ್ತಿನ ಜನರಿಗೆಲ್ಲಾ ತಾವು ತಯ್ಯಾರಿಸಿದ ಸೋಡಾ
ಮಾರಾಟ ಮಾಡಿ, ಇಂಗ್ಲಿಷರು ಶಿಮಂತರಾದರು.
೧೮೫೨ರಲ್ಲಿ ಧಾತುಗಳ ರಾಸಾಯನಿಕ ಸಂಯೋಗ ಸಾಮರ್ತ್ಯಯ ನಿರೂಪಣೆಯಾಯಿತು. ಜಲಜನಕ ಹಾಗು ಕ್ಲೋರಿನ್ ಧಾತುವಿನ ಸಂಯೋಗ ಸಾಮರ್ಥ್ಯ ಒಂದು, ಆದರೆ ಆಮ್ಲಜನಕದ ಸಂಯೋಗ ಸಾಮರ್ಥ್ಯ ಎರಡು. ಕೆಲವು ಧಾತುಗಳು ಒಂದಕ್ಕಿಂತ ಅಧಿಕ ಸಂಯೋಗ ಸಾಮರ್ಥ್ಯ ಹೊಂದಿರುತ್ತವೆ. ಕಬ್ಬಿಣದ ಸಾಮಾನ್ಯ ಸಂಯೋಗ ಸಾಮರ್ಥ್ಯ ಎರಡು ಅಥವಾ ಮೂರು ಆಗಿರುತ್ತದೆ.
ಸಂಯೋಗ ಸಾಮರ್ಥ್ಯ ಎಂದರೆ, ವಿವಿಧ ಪ್ರಕಾರದ ಪರಮಾಣುಗಳು ಸೇರಿಕೊಂಡು ಸಂಯುಕ್ತ ವಸ್ತುಗಳಾಗಿ ರೂಪಾಂತರವಾಗುವಾಗ ತಮ್ಮ ಹೊರಕವಚದಲ್ಲಿರುವ ಎಲೆಕ್ಟ್ರಾನ್ ಗಳ ಕೊಡು-ಕೊಳ್ಳು ಸಾಮರ್ಥ್ಯ ಎಂದು ಅರ್ಥ. ಧಾತುಗಳು ಸೇರಿಕೊಂಡು ಸಂಯುಕ್ತಗಳು ಉಂಟಾಗುವಾಗ, ಪರಸ್ಪರ ಇಲೆಕ್ಟ್ರಾನುಗಳ ಹಂಚಿಕೆಯಾಗುವ ಗುಣವನ್ನೇ ಸಂಯೋಗ ಸಾಮರ್ಥ್ಯ ಅನ್ನುವರು.
೧೮೫೯ರಲ್ಲಿ ಬನ್ಸೆನ್ ಮತ್ತು ಕಿರ್ಚಾಫ್ ಎನ್ನುವ ವಿಜ್ಞಾನಿಗಳು ಸ್ಪೆಕ್ಟ್ರೊಸ್ಕೋಪ್ ಎನ್ನುವ ಉಪಕರಣ ತಯ್ಯಾರಿಸಿದರು ; ಚೆನ್ನಾಗಿ ಹೆಚ್ಚಿನ ಶಾಖ ಕೊಟ್ಟು ಕಾಯಿಸಿದಾಗ, ಪ್ರತಿಯೊಂದು ಧಾತುವು ಅನಿಲ ರೂಪ ಪಡೆದುಕೊಳ್ಳುತ್ತದೆ. ಸ್ಪೆಕ್ಟ್ರೋಸ್ಕೊಪ್ ಬಳಸಿ ಉರಿಯುವ ಧಾತುವನ್ನು ನೋಡಿದಾಗ, ಆ ಧಾತುವು ತನ್ನದೇ ಆದ, ವಿಶಿಷ್ಟ ಬೆಳಕಿನ ವರ್ಣಪಟಲವನ್ನು ಉಂಟುಮಾಡುತ್ತದೆ ಎಂದು ಕಂಡುಹಿಡಿದರು. ಈ ವಿಧಾನವು ಹೊಸ ಧಾತುಗಳನ್ನು ಕಂಡುಹಿಡಿಯಲು ಅನುಕೂಲವಾಯಿತು. ಈ ವಿಧಾನ ಬಳಸಿ ವಿಜ್ಞಾನಿಗಳು ಉರಿಯುವ ಸೂರ್ಯನಲ್ಲಿ ಹೀಲಿಯಂ ಧಾತು ಇದೆಯೆಂದು ಪತ್ತೆಹಚ್ಚಿದರು.
೧೮೬೦ರಲ್ಲಿ ವಿಜ್ಞಾನಿ ಕೆಕೂಲೆಯವರ ನೇತ್ರಿತ್ವದಲ್ಲಿ, ಜರ್ಮನಿ ದೇಶದಲ್ಲಿ ಮೊದಲಬಾರಿಗೆ ಜಾಗತಿಕ ರಸಾಯನ ಶಾಸ್ತ್ರದ ವಿಜ್ಞಾನಿಗಳ ಸಮ್ಮೇಳನ ಏರ್ಪಟ್ಟಿತ್ತು. ಇದರಲ್ಲಿ ೧೪೦ ಜನ ವಿಜ್ಞಾನಿಗಳು ಪಾಲ್ಗೊಂಡರು. ರಸಾಯನ ಶಾಸ್ತ್ರದ ಸಿಧಾಂತಗಳ ವಿಮರ್ಶ ನಡೆಯಿತು. ಕೊನೆಯಲ್ಲಿ ಕ್ಯಾನಿಝಾರೋ ಎನ್ನುವವರು, ಅವೊಗಾಡ್ರೋನ ಅನಿಲಗಳ ಅಣು ಸಿಧಾಂತ, ಬರ್ಜ್ಹೆಲಿಯಸನ ಅನುರಾಶಿಗಳ ಬಗ್ಗೆ ವಿವರಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೆ ಧಾತುಗಳ ಸಾಪೇಕ್ಷೆ-ರಾಶಿ ಸಂಖ್ಯೆಗಳ ಕೋಷ್ಟಕವನ್ನು ವಿತರಿಸಿದರು. ಅದಾಗಲೇ ಹೊಸದಾಗಿ ಪದವಿ ಪಡೆದ ಸೈಬೀರಿಯಾದ ವಿಜ್ಞಾನಿ, ಮೆಂಡೆಲಿವರು ಸಹ ಈ ಸಮ್ಮೇಳನದಲ್ಲಿ ಭಾಗವಹಿಸದ್ದರು. ಇವರು ಸಮ್ಮೇಳನದಲ್ಲಿ ಹಲವಾರು ವಿಜ್ಞಾನಿಗಳು ಮಂಡಿಸಿದ ಮಾಹಿತಿಯನ್ನು ವಿವರವಾಗಿ ಬರೆದುಕೊಂಡರು.
೧೮೬೯ರಲ್ಲಿ ಸೈಬೀರಿಯಾದ ವಿಜ್ಞಾನಿ ಮೆಂಡೆಲೀವರು ತಾವು ಪಡೆದ ಮಾಹಿತಿಯ ಆಧಾರದ ಮೇಲೆ ಧಾತುಗಳ ಆವರ್ತಕ ಕೋಷ್ಟಕವನ್ನು ನಿರ್ಮಿಸಿ ಪ್ರಕಟಿಸಿದರು. ಅವರು ಅಲ್ಲಿಯವರೆಗೆ ತಿಳಿದಿರುವ ೬೩ ಧಾತುಗಳನ್ನು ಕೋಷ್ಟಕದಲ್ಲಿ ಅಡ್ಡಸಾಲು ಹಾಗು ಕಂಬಸಾಲುಗಳಾಗಿ ವರ್ಗಿಕರಿಸಿದರು. ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಬರೆದರು. ಒಂದೇ ಪ್ರಕಾರದ ಗುಣಗಳುಳ್ಳ ಧಾತುಗಳು ಒಂದೇ ಕಂಬಸಾಲಿನಲ್ಲಿ ಸೇರಿಸಿದರು. ಇದರಿಂದ ಧಾತುಗಳ ಅಧ್ಯಯನಕ್ಕೆ ಬಲು ಅನುಕೂಲವಾಯಿತು. ಧಾತುಗಳನ್ನು ಲೋಹ ಹಾಗು ಅಲೋಹಗಳೆಂದು ಸಹ ವರ್ಗಿಕರಿಸಿದರು.
ಆವರ್ತ ಕೋಷ್ಟಕವು ಮೂಲಧಾತುಗಳನ್ನು ಕ್ರಮಾವಾಗಿ ಪ್ರದರ್ಶಿಸುವ ಒಂದು ವಿನ್ಯಾಸ. ಪ್ರಸಕ್ತವಾಗಿ ಉಪಯೋಗದಲ್ಲಿರುವ ಕೋಷ್ಟಕವನ್ನು ಮೊದಲು ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್ ರಚಿಸಿದನು. ಮೂಲಧಾತುಗಳ ಗುಣಧರ್ಮಗಳು ನಿರ್ದಿಷ್ಟ ರೀತಿಯಲ್ಲಿ ಬದಲಾಗುವುದರಿಂದ ಅವುಗಳನ್ನು ಗುಂಪುಗಳಾಗಿ ಮತ್ತು ಆವರ್ತಗಳಾಗಿ ವಿಂಗಡಿಸಲಾಗುತ್ತವೆ.
ದಿಮಿತ್ರಿ ಮೆಂಡಲೀವ್ ೧೮೬೯ ರಲ್ಲಿ ಪ್ರಕಟಿಸಿದ ಆವರ್ತ ಕೋಷ್ಟಕ ಈ
ಶತಮಾನದ ಇನ್ನೊಂದು ಮಹತ್ವದ ಹೆಜ್ಜೆಯಾಗಿತ್ತು. ಜೂಲಿಯರ್ಸ್ ಮೇಯರ್‌ನ ಕೋಷ್ಟಕವೂ ಸಹ
೧೮೬೮ರಲ್ಲಿ ಪ್ರಕಟನೆಗೆ ಹೋದರೂ ೧೮೭೦ ರವರೆಗೂ ಪ್ರಕಟವಾಗಲಿಲ್ಲ. ಮೆಂಡಲೀವ್ ಸಹ
ಮೇಯರ್‌ನಂತೆ ಪರಮಾಣು ತೂಕದ ಆಧಾರದ
ಮೇಲೆ ಮೂಲಧಾತುಗಳನ್ನು ಜೋಡಿಸಿದ ಮತ್ತು ಅವುಗಳ ಗುಣಗಳ ಆಧಾರದ ಮೇಲೆ ಏಳು
ಸಾಲುಗಳನ್ನಾಗಿ ಪೇರಿಸಿದ. ಅವನು ಕೆಲವು ಮೂಲಧಾತುಗಳು ಇನ್ನೂ ಕಂಡುಹಿಡಿಯ ಬೇಕಿದೆ ಎಂದು
ಖಾಲಿ ಸ್ಥಳಬಿಟ್ಟ ಮತ್ತು ಅವುಗಳ ಗುಣಗಳನ್ನು ಊಹಿಸಿದ. ಅಲ್ಲದೆ ಮೆಂಡಲೀವ್ ಕೆಲವೊಮ್ಮೆ
ಅಣುತೂಕ ವನ್ನೂ ಕಡೆಗೆಣಿಸಿ ಧಾತುಗಳ ಗುಣಗಳು ಎಲ್ಲಿ ಸರಿಹೊಂದುತ್ತವೆಯೊ ಅಲ್ಲಿ
ಕೂರಿಸಿದ. ಜಡಾನಿಲಗಳನ್ನು (ಅಥವಾ ಶ್ರೇಷ್ಠ ಅನಿಲ) ಆ ನಂತರವೇ ಶತಮಾನದ ಕೊನೆಗೆ ವಿಲಿಯಂ ರಾಮ್ಸೆ ಕಂಡುಹಿಡಿದ ನಂತರ, ಆವರ್ತ ಕೋಷ್ಟಕಕ್ಕೆ ಇನ್ನೊಂದು ಕಂಬಸಾಲು ಸೇರಿಸಲಾಯಿತು.
ಮೆಂಡಲೀವ್‍ರವರು ೧೮೬೯ರ ರಷ್ಯನ್ ಕೆಮಿಕಲ್ ಸೊಸೈಟಿಯ ಸಂಸ್ಥಾಪಕರಾಗಿದ್ದರು.
ಮೆಂಡಲೀವ್‍ರವರು ತಮ್ಮ ಆವರ್ತ ಕೋಷ್ಟಕದಲ್ಲಿ ಮೂಲಧಾತುಗಳನ್ನು ಅದರ ರಸಾಯನಿಕ ಗುಣಲಕ್ಷಣಗಳ ಪ್ರಕಾರ ವಿಂಗಡಿಸಲು ತೀರ್ಮಾನಿಸಿದರು. ೬ ಮಾರ್ಚ್ ೧೮೬೯ರಲ್ಲಿ ಮೆಂಡಲೀವ್‍ರವರು ಮೂಲಧಾತುಗಳನ್ನು ಅದರ ಪರಮಾಣು ತೂಕ ಮತ್ತು ವೆಲೆನ್ಸಿಯಾನುಸಾರ ವಿಂಗಡಿಸಬಹುದೆಂದು ರಷ್ಯನ್ ಕೆಮಿಕಲ್ ಸೊಸೈಟಿಯಲ್ಲಿ ಪ್ರಸ್ತುತ ಪಡಿಸಿದರು. ಇದರಲ್ಲಿನ ಕೆಲವು ಮುಖ್ಯ ಅಂಶಗಳೆಂದರೆ,
- ಮೂಲಧಾತುಗಳನ್ನು ಅದರ ಪರಮಾಣು ತೂಕದ ಪ್ರಕಾರ ವಿಂಗಡಿಸಿದರೆ ಅವು ಒಂದು ಸ್ಪಷ್ಟ ಆವರ್ತನವನ್ನು ಪ್ರದರ್ಶಿಸುತ್ತದೆ.
- ರಸಾಯನಿಕ ಗುಣಲಕ್ಷಣಗಳಲ್ಲಿ ಹೋಲಿಕೆ ಇರುವ ಮೂಲಧಾತುಗಳ ಪರಮಾಣು ತೂಕ ಸುಮಾರು ಒಂದೇ ರೀತಿಯಲ್ಲಿ ಇರುತ್ತದೆ (ಉದಾ:Pt, Ir, Os) ಅಥವಾ ನಿಯಮಿತವಾಗಿ ಹೆಚ್ಚಿರುತ್ತದೆ (ಉದಾ:K, Rb, Cs).
- ಮೂಲಧಾತುಗಳನ್ನು ಅದರ ಪರಮಾಣು ತೂಕದ ಪ್ರಕಾರ ವಿಂಗಡಿಸಿದರೆ, ಮೂಲಧಾತುಗಳ ಪರಮಾಣು ತೂಕ, ವೆಲೆನ್ಸಿಗೆ ಅನುರೂಪವಾಗಿರುತ್ತದೆ ಹಾಗು ಸ್ವಲ್ಪ ಮಟ್ಟಿಗೆ ಅದರ ರಸಾಯನಿಕ ಗುಣಲಕ್ಷಣಗಳಲ್ಲಿ ಹೋಲಿಕೆ ಇರುತ್ತದೆ. ಇದನ್ನು ನಾವು Li, Be, B, C, N, O ಮತ್ತು F ಸರಣಿಯಲ್ಲಿ ಕಾಣಬಹುದು. ಅತ್ಯಂತ ವ್ಯಾಪಕವಾಗಿ ಹರಡಿರುವ ಮೂಲಧಾತು ಸಣ್ಣ ಪರಮಾಣು ತೂಕ ಹೊಂದಿರುತ್ತದೆ.
- ಪರಮಾಣು ತೂಕ ಮೂಲಧಾತುವಿನ ಪಾತ್ರವನ್ನು ನಿರ್ಧರಿಸುತ್ತದೆ.
- ಆಲ್ಯೂಮಿನಿಯಂ ಮತ್ತು ಸಿಲಿಕಾನ್‍ಗೆ ಹೋಲಿಕೆಯಾಗುವ, ಪರಮಾಣು ತೂಕ ೬೫ ಮತ್ತು ೭೫ ರ ನಡುವೆ ಬರುವ ಒಂದು ಮೂಲಧಾತುವಿನ ಆವಿಷ್ಕಾರಕ್ಕಾಗಿ ನಾವು ನಿರೀಕ್ಷಿಸಬಹುದು.
- ಕೆಲವು ಮೂಲಧಾತುಗಳ ವಿಶಿಷ್ಟ ಗುಣಗಳನ್ನು ಅವುಗಳ ಪರಮಾಣು ತೂಕದಿಂದ ವಿವರಿಸಬಹುದು.
೧೮೮೭ರಲ್ಲಿಆಗಸ್ಟ್ ಅರೆಹಿನ್ಸ್ ಎನ್ನುವವರು, ಲವಣಗಳ ಅಯಾನಿಕ್ ಸಿಧಾಂತ ನಿರೂಪಿಸಿದರು. ಎಲ್ಲಾ ಆಮ್ಲ, ಪ್ರತ್ಯಾಮ್ಲ, ಮತ್ತು ಲವಣಗಳು ನೀರಿನಲ್ಲಿ ಕರಗಿ ಅಯಾನುಗಳಾಗಿ ಬೇರ್ಪಡುತ್ತವೆ ಎಂದು ವಿವರಿಸಿದರು.
೧೮೯೬ರಲ್ಲಿ ಹೀನ್ರಿ ಬೆಕ್ವೆರಲ್ ರು ಯುರೇನಿಯಂ ಧಾತುವಿನಲ್ಲಿ ವಿಕಿರಣ ಪಟುತ್ವವನ್ನು ಕಂಡುಹಿಡಿದರು. ಕೆಲವು ಧಾತುಗಳ ಪರಮಾಣುಗಳು ಸಹಜವಾಗಿ ಶಕ್ತಿಯನ್ನು ವಿಕಿರಣ ರೂಪದಲ್ಲಿ ಹೊರಚೆಲ್ಲುತ್ತವೆ. ಈ ಕ್ರಿಯೆಯಲ್ಲಿ ಅವು ತಾವಾಗಿಯೇ ರೂಪಾಂತರಗೊಳ್ಳುತ್ತವೆ ಎಂದು ತಿಳಿಯಿತು. ಈ ವಿದ್ಯಮಾನವನ್ನು ಯಾವ ಬಾಹ್ಯಾ ವಿಧಾನದಿಂದಲೂ ಬದಲಾಯಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಯಿತು.
೧೮೯೬ರಲ್ಲಿ ಮೇರಿ ಕ್ಯೂರಿ ಮತ್ತು ಪಿಯೆರೇ ಕ್ಯೂರಿಯವರು ಪೊಲೊನಿಯಮ್ ಹಾಗು ರೇಡಿಯಂ ಧಾತುಗಳನ್ನು ಕಂಡುಹಿಡಿದರು. ವಿಕಿರಣ ಪಟುತ್ವ ಧಾತುವಿನ ಪರಮಾಣುಗಳ ಗುಣ-ಸ್ವಭಾವ ಎಂದು ವಿವರಿಸಿದರು. ಹೆಚ್ಚು ಭಾರವುಳ್ಳ ಪರಮಾಣುಗಳು ಸಹಜವಾಗಿ ವಿಕಿರಣ ಪಟುತ್ವ ಗುಣವನ್ನು ಪ್ರದರ್ಶಿಸುತ್ತವೆ, ಎಂದರು.
೧೮೯೮ರಲ್ಲಿ ವಿಲಿಯಂ ರಾಮಸೇ ಎನ್ನುವ ವಿಜ್ಞಾನಿ, ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸದ ಜಡ ಅನಿಲಗಳನ್ನು ಕಂಡುಹಿಡಿದರು. ಈ ಅನಿಲಗಳು ಅನ್ಯ ಧಾತುಗಳೊಂದಿಗೆ ರಾಸಾಯನಿಕ ಕ್ರಿಯೆಯೆಲ್ಲಿ ಭಾಗಿಯಾಗುವುದಿಲ್ಲ ಎಂದು ಗೊತ್ತಾಯಿತು. ಇಂತಹ ಅನಿಲಗಳನ್ನು ನೊಬೆಲ್ ಗ್ಯಾಸ ಎಂದರು.
೧೮೬೮ರಲ್ಲಿ ಸೂರ್ಯನಲ್ಲಿ ಹೀಲಿಯಂ
ಇರುವ ಅನುಮಾನ ಉಂಟಾಯಿತು. ೧೮೮೨ರಲ್ಲಿ ಭೂಮಿಯಲ್ಲಿ ಕೂಡಾ ಹೀಲಿಯಂ ಧಾತು ಇರುವುದು
ಪತ್ತೆಯಾಯಿತು. ವಿಲಿಯಂ ರಾಮಸೆಯವರು ವಾತಾವರಣದ ಅನಿಲಗಳ ಅಧ್ಯಯನದಿಂದ ಹೀಲಿಯಂ
ಬೇರ್ಪಡಿಸಿದರು. ರಾಮಸೆಯವರು, ರೇಡಿಯಂ ಧಾತುವು, ವಿಕಿರಣ ಹೊರಸೂಸುವಾಗ, ಹೀಲಿಯಂ ಧಾತು,
ಅನಿಲ ರೂಪದಲ್ಲಿ ಬಿಡುಗಡೆಯಾಗುವುದನ್ನು ವಿವರಿಸಿದರು.
೧೯೦೦ರವರೆಗೆ ಗುರುತಿಸಿದ, ವಿವಿಧ ಪ್ರಕಾರದ ಮೂಲಧಾತುಗಳ ಸಂಖ್ಯೆ ೮೮ಕ್ಕೆ ಏರಿತು.
ಮೇರಿ ಕ್ಯೂರಿ (Maria Curie) ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ.ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು.
ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು, ಪ್ರೌಢಶಾಲೆಯಲ್ಲೇ ಚಿನ್ನದ ಪದಕವನ್ನ ಗಳಿಸಿದ್ದರು. ೧೮೯೧ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ ನಗರಕ್ಕೆ ತೆರಳಿದರು. ಅಲ್ಲಿನ ಸೌಖನ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು. ಅಲ್ಲೇ ಇವರಿಗೆ ಪಿಯರೇ ಕ್ಯೂರಿಯ ಪರಿಚಯವಾಗಿದ್ದು. ವಿವಾಹದ ನಂತರ ಇಬ್ಬರೂ ಜತೆಗೂಡಿ ಸಂಶೋಧನೆಯನ್ನ ಕೈಗೊಂಡರು.
ಸಾಮಾನ್ಯ ರೂಪದಲ್ಲಿ ಸಿಗುವಂತ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಇವರು ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನ ಕಂಡುಹಿಡಿದರು. ೧೯೦೩ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಲು ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನ ಹಂಚಿಕೊಂಡರು. ೧೯೧೧ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರದು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ.
೧೮೯೭ರಲ್ಲಿ ಜೆ ಜೆ ಥಾಮ್ಸನ್ನರು ಕ್ಯಾಥೋಡ್ ಕಿರಣಗಳ ಪ್ರಯೋಗ ಮಾಡಿ, ಎಲ್ಲಾ ಧಾತುಗಳ ಪರಮಾಣುಗಳು ಎಲೆಕ್ಟ್ರಾನ್ ಗಳೆಂಬ ಉಪಕಣಗಳು ಹೊಂದಿವೆ ಎಂದು ವಿವರಿಸಿದರು. ಎಲೆಕ್ಟ್ರಾನ್ ಗಳು ಋಣ ವಿದ್ಯುತ್ ಆವೇಶ ಹೊಂದಿರುತ್ತವೆ ಎಂದು ವಿವರಿಸಿದರು.
೧೯೦೦
ಬೆಳಕಿನ ವರ್ಣಪಟಲವು ಶಕ್ತಿಯ ಪೊಟ್ಟಣದಂತೆ ವರ್ತಿಸುತ್ತದೆ. ಪ್ಲಾಂಕರು E=hv ಎನ್ನುವ
ಸೂತ್ರ ನಿರೂಪಿಸಿದರು. ಇದು ಪರಮಾಣುವಿನ ಕ್ವಾನ್ಟಮ್ ಸಿಧಾಂತಕ್ಕೆ ನಾಂದಿಯಾಯಿತು.
೧೯೧೧ರ ಹೊತ್ತಿಗೆ ಪರಮಾಣುವೂ ಋಣ ವಿದ್ಯುತ್ ಆವೇಶಯುಳ್ಳ ಎಲೆಕ್ಟ್ರಾನ್ ಮತ್ತು ಧನ ಆವೇಶಯುಳ್ಳ ಬೀಜಕೇಂದ್ರ ಹೊಂದಿದೆ ಎಂದು ರದರಫೋರ್ಡರ ಪ್ರಯೋಗಗಳಿಂದ ಖಚಿತವಾಯಿತು.
ಮೂಲತಃ
ಪರಮಾಣುವಿನ ರಾಶಿಯು ಬೀಜಕೇಂದ್ರದ್ದೇ ಆಗಿದೆ. ಬೀಜಕೇಂದ್ರದ ಸುತ್ತ ಸುತ್ತುತ್ತಿರುವ
ಎಲೆಕ್ಟ್ರಾನಿನ ರಾಶಿಯು ಪ್ರೋಟಾನಿನ ರಾಶಿಗೆ ಹೋಲಿಸಿದರೆ, ನಗಣ್ಯ. ಸುಮಾರು ೧೮೦೦
ಇಲೆಕ್ಟ್ರಾನುಗಳ ರಾಶಿ, ಒಂದು ಪ್ರೋಟಾನಿನ ರಾಶಿಗೆ ಸಮ ಇರುತ್ತದೆ.
೧೯೧೩ರಲ್ಲಿ
ಡೆನ್ಮಾರ್ಕಿನ ವಿಜ್ಞಾನಿ ನೀಲ್ಸ ಬೊಹರರು, ಹೈಡ್ರೋಜನ್ ಪರಮಾಣುವಿನ ರಚನಾ ಸಿಧಾಂತವನ್ನು
ಎಸೆಸ್ವಿಯಾಗಿ ವಿವರಿಸಿದರು. ಜಲಜನಕದ ವಿಶಿಷ್ಟ ವರ್ಣ ಪಟಲವನ್ನು ನಿಖರವಾಗಿ ವಿವರಿಸುವ
ಸೂತ್ರ ನಿರೂಪಿಸಿದರು. ಪರಮಾಣುವಿನ ಬೀಜಕೇಂದ್ರದ ಸುತ್ತ ಎಲೆಕ್ಟ್ರಾನ್ ನಿರ್ಧಾರಿತ
ಶಕ್ತಿ ಕವಚಗಳಲ್ಲಿ ಮಾತ್ರ ಸುತ್ತುತ್ತಿರುತ್ತದೆ ಎಂದರು.
೧೯೧೪ರಲ್ಲಿ ಆಂಗ್ಲ ವಿಜ್ಞಾನಿ ಹೆನ್ರಿ ಮೊಸೆಲಿಯವರಿಂದ ಪರಮಾಣು ಸಂಖ್ಯೆಯ ವ್ಯಾಖ್ಯಾನ ನೀಡಲಾಯಿತು. ಪರಮಾಣು ಸಂಖ್ಯೆಯು ಪರಮಾಣು ಬೀಜಕೇಂದ್ರ ಹೊಂದಿರುವ ಒಟ್ಟು ಪ್ರೋಟಾನ್ ಗಳ ಸಂಖ್ಯೆಗೆ ಸಮ ಇರುತ್ತದೆ ಎಂದು ಹೇಳಿದರು. ಈ ತಿಳುವಳಿಕೆಯ ನಂತರ, ಧಾತುಗಳ ಆವರ್ತಕ ಕೋಷ್ಟಕವನ್ನು, ಧಾತುಗಳ ಪರಮಾಣು ಸಂಖ್ಯೆ ಬಳಸಿ ರಚಿಸಿದರು. ಆವರ್ತಕ ಕೋಷ್ಠಕದ ನ್ಯೂನತೆಗಳನ್ನು ತಿದ್ದಲಾಯಿತು. ಆಧುನಿಕ ಆವರ್ತಕ ಕೋಷ್ಟಕದಲ್ಲಿ ೭ ಅಡ್ಡಸಾಲುಗಳು, ಮತ್ತು ೧೮ ಕಂಭಸಾಲುಗಳಿವೆ.
೧೯೧೬ರಲ್ಲಿ ಜ್ಯೂಲಿಯಸರು, ಸಂಯುಕ್ತ ವಸ್ತುಗಳ ರಚನೆಗೆ ಸಂಬಂಧಿಸಿದಂತೆ, ಪರಮಾಣುಗಳ ಜೋಡಣೆಯ ಅಷ್ಟಕ ನಿಯಮದ ನಿರೂಪಿಸಿದರು. "ಒಂದು ಪರಮಾಣುವಿನ ಹೊರಕವಚದಲ್ಲಿ ಎಂಟು ಎಲೆಕ್ಟ್ರಾನುಗಳಿದ್ದರೆ ಅದು ಸ್ಥಿರ ಸ್ಥಿತಿಯನ್ನು ಹೊಂದುತ್ತದೆ" ಎಂದರವರು.
೧೯೧೬ರಲ್ಲಿ ಅಮೆರಿಕೆಯ ವಿಜ್ಞಾನಿ ಜಿ. ಎನ್. ಲೆವಿಸರು, ರಾಸಾಯನಿಕ ಸಹವೇಲೆನ್ಸಿ ಬಂಧದ ನಿರೂಪಣೆ ಕೊಟ್ಟರು. ಲೆವಿಸರು ಸಹವೆಲೆನ್ಸಿ ಬಂಧ ನಿಯಮ ಬಳಸಿ, ಸಂಯುಕ್ತ ಕಣಗಳ ಅಣುರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು. ಅವರು, ೧೯೨೩ರಲ್ಲಿ ಲೆವಿಸ್ ಆಮ್ಲ ಮತ್ತು ಲೆವಿಸ್ ಪ್ರತ್ಯಾಮ್ಲಗಳ ಪರಿಕಲ್ಪನೆ ಕೊಟ್ಟರು. ರಾಸಾಯನಿಕ ಬದಲಾವಣೆಯಲ್ಲಿ, ಲೆವಿಸ್ ಆಮ್ಲಗಳು, ಇಲೆಕ್ಟ್ರಾನ್ ಜೋಡಿಯನ್ನು [ಪ್ರತ್ಯಾಮ್ಲಗಳಿಂದ] ಸ್ವೀಕರಿಸುತ್ತವೆ ಎಂದರು.
೧೯೧೯ರಲ್ಲಿ ರದರ್ಫೋರ್ಡರು, ಪರಮಾಣುವಿನ ಬೀಜಕೇಂದ್ರದಲ್ಲಿರುವ ಧನಾವೇಶಯುಳ್ಳ ಪ್ರೋಟಾನ್
ಕಣವನ್ನು ಕಂಡುಹಿಡಿದರು. ಪರಮಾಣುವಿನ ಬೀಜಕೇಂದ್ರವು ಅತೀ ಕಡಿಮೆ ಸ್ಥಳವನ್ನು ಆಕ್ರಮಿಸಿ
ಕೊಳ್ಳುತ್ತದೆಂದು, ಆದ್ದರಿಂದ ಪರಮಾಣುಗಳ ಹೆಚ್ಚಿನ ಭಾಗ ಪೊಳ್ಳಾಗಿವೆಯಂದು
ವಿವರಿಸಿದರು. ಪರಮಾಣುವಿನ ಹೆಚ್ಚಿನ ಸ್ಥಳವನ್ನು ಎಲೆಕ್ಟ್ರಾನುಗಳೇ
ಆಕ್ರಮಿಸಿಕೊಂಡಿರುತ್ತವೆ ಎಂದರು.
೧೯೨೪ರಲ್ಲಿ ಡಿ ಬ್ರೊಗ್ಲೆಯವರು,
ಎಲೆಕ್ಟ್ರಾನಿನ ರಚನಾ ರೂಪವು, ಅಲೆ ಹಾಗೂ ಕಣ ಎನ್ನುವ ದ್ವಿಗುಣ ಪ್ರಕೃತಿಯನ್ನು ಹೊಂದಿದೆ
ಎಂದು ನಿರೂಪಿಸಿದರು. ಇಲೆಕ್ಟ್ರಾನು ಕೆಲವೊಮ್ಮೆ ಅಲೆಯಂತೆ ಮತ್ತು ಕೆಲವೊಮ್ಮೆ ಕಣದಂತೆ
ವರ್ತಿಸುತ್ತದೆ ಎಂದರು. ಇವರ ಸಿಧಾಂತಕ್ಕೆ ನೋಬಲ್ ಪುರಸ್ಕಾರ ದೊರೆಯಿತು.
೧೯೨೬ರಲ್ಲಿ ಶ್ರೋಡಿಂಗರ್ ವಿಜ್ಞಾನಿಯು ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದರು. H𝟁 = E𝟁 ,
ಶ್ರೋಡಿಂಗರರ ಕ್ವಾನ್ಟಮ್ ಸಮೀಕರಣವು ಪರಮಾಣುವಿನ ಒಳರಚನೆ ವಿವರಿಸುವಲ್ಲಿ ಸಫಲವಾಯಿತು. ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸದ ಗುಟ್ಟು ರಟ್ಟಾಯಿತು.
iℏ ∂Ψ/∂t = −ℏ2/2m ∂2Ψ/∂x2 +V(x)Ψ(x,t).
ಶ್ರೋಡಿಂಗರರ ಸಮೀಕರಣದ ಅನ್ವಯದಿಂದ ಹೈಡ್ರೋಜನ್ ಪರಮಾಣುವಿನ ರಚನಾ ವಿನ್ಯಾಸ ಬಿಡಿಸಲು ಸಾಧ್ಯವಾಯಿತು. n ,l, m, ಎನ್ನುವ ಪರಸ್ಪರ ಸಂಭಂಧವುಳ್ಳ ಕ್ವಾನ್ಟಮ್ ಸಂಖ್ಯಗಳು ಹೊರಬಿದ್ದವು.
Principal quantum number n = 1,2,3,4 .....
azimuthal quantum number l = 0,1,2,3......(n-1)
magnetic quantum number m = ......-3, -2 , -1, 0 , +1, +2, +3 ....
ಇದರಿಂದ ಪರಮಾಣುಗಳ s, p, d, ಮತ್ತು f, ಉಪಕವಚಗಳ ಪರಿಚಯವಾಯಿತು. ಇಲೆಕ್ಟ್ರಾನುಗಳು s, p, d, f, ಎನ್ನುವ ಉಪಕವಚಗಳಲ್ಲಿ ಹಂಚಿಕೆಯಾಗಿರುತ್ತವೆ.
Quantum theory of Atomic structure:
Quantum Numbers Energy levels
N = 1, Ꝉ= 0 1s
N = 2, Ꝉ= 0 , 1 2s, 2p
N = 3, Ꝉ= 0 , 1, 2 3s, 3p, 3d
N = 4, Ꝉ= 0, 1, 2, 3 4s, 4p, 4d, 4f
N = 5, Ꝉ= 0, 1, 2, 3 5s, 5p, 5d, 5f
N = 6, Ꝉ= 0, 1, 2 6s, 6p, 6d
N = 7, Ꝉ= 0, 1 7s, 7p
orbital type numbers maximum electrons
S orbital one 2
P orbital three 6
D orbital five 10
F orbital seven 14
೧೯೩೨ರಲ್ಲಿ ಜೇಮ್ಸ್ ಚಾಡ್ವಿಕ್ ರವರು, ಪರಮಾಣು ಬೀಜಕೇಂದ್ರ ಹೊಂದಿರುವ ನ್ಯೂಟ್ರಾನ್
ಎನ್ನುವ ಉಪಕಣವನ್ನು ಕಂಡುಹಿಡಿದರು. ಈ ಕಣಕ್ಕೆ ಯಾವುದೇ ವಿದ್ಯುತ್ ಆವೇಷ ಇರುವುದಿಲ್ಲ.
ಇದರ ರಾಶಿ ಪ್ರೋಟಾನಿನ ರಾಶಿಗೆ ಸಮವಾಗಿರುತ್ತದೆ ಎಂದು ತಿಳಿದುಬಂದಿದೆ.
ಹೀಗೆ ಒಂದು ಪರಮಾಣುವೂ ಎಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್ ಎನ್ನುವ ಸೂಕ್ಷ್ಮ ಕಣಗಳಿಂದ ಆಗಿದೆ. ಪ್ರೋಟಾನ್ ಅಥವಾ ನ್ಯೂಟ್ರಾನ್ ಕಣದ ರಾಶಿಗೆ ಹೋಲಿಸಿದರೆ ಎಲೆಕ್ಟ್ರಾನ್ ರಾಶಿಯು ನಗಣ್ಯ ಎನಿಸುತ್ತದೆ. ಆದರೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ವಿದ್ಯುತ್ ಆವೇಶವು ಸಮ ಇರುತ್ತದೆ . ಒಂದು ಪರಮಾಣುವು ಹೊಂದಿರುವ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಂಖ್ಯೆ ಸಮಾನವಾಗಿರುತ್ತದೆ.
೧೯೩೪ರ ಹೊತ್ತಿಗೆ ಯುರೇನಿಯಂ ಪರಮಾಣು ಬೀಜವನ್ನು ಒಡೆಯಬಹುದೆಂಬ ತಂತ್ರಗಾರಿಕೆ ಕರಗತವಾಯಿತು.
ಯುರೇನಿಯಂ-235, ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿದಾಗ, ಪರಮಾಣುವೂ ಒಡೆದು ತುಂಡರಿಸಿ, ಹಗುರವಾದ ಎರಡು ಪರಮಾಣುಗಳು ಉಂಟಾಗುತ್ತವೆ ಮತ್ತು ಜೊತೆಯಲ್ಲಿ ಕೆಲವು ನಿವ್ಟ್ರಾನುಗಳೊಂದಿಗೆ, ಅಪಾರ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ, ಎಂದು ಪ್ರಯೋಗಗಳಿಂದ ಖಚಿತವಾಯಿತು. ಈ ಸಿಧಾಂತವನ್ನು ಬಳಸಿ ಅಟಾಮಿಕ್ ರಿಯಾಕ್ಟರ್ ನಲ್ಲಿ ಯುರೇನಿಯಂ ವಿದಳನ ಕ್ರಿಯೆಯಿಂದ ವಿದ್ಯುತ್ ಶಕ್ತಿಯನ್ನು ಉತ್ಪನ್ನ ಮಾಡುತ್ತಾರೆ.
ಯುರೇನಿಯಮ್ ಒಂದು ಮೂಲಧಾತು ಲೋಹ. ಇದು ವಿಕಿರಣಶೀಲ ವಸ್ತು. ಪ್ಲುಟೋನಿಯಮ್ನ ನಂತರ ಅತ್ಯಂತ ಭಾರವಾದ ಮೂಲಧಾತು. ಯುರೇನಿಯಮ್ ಅನ್ನು ಪ್ರಥಮವಾಗಿ ಇದರ ಮೂಲ ಅದಿರಿನಿಂದ ೧೮೪೧ರಲ್ಲಿ ಫ್ರಾನ್ಸ್ ನ ಯೂಜಿನ್ ಪೆಲಿಗಾಟ್ ಎಂಬವರು ಬೇರ್ಪಡಿಸಿದರು. ಇದಕ್ಕೆ ಮೂರು ನೈಸರ್ಗಿಕ ಸಮಸ್ಥಾನಿ (isotope)ಗಳು ಇವೆ. ಇದರ ಒಂದು ಸಮಸ್ಥಾನಿ ಯುರೇನಿಯಮ್-೨೩೫ ಸುಲಭವಾಗಿ ವಿದಳನ ಕ್ರಿಯೆಗೆ ಒಳಗಾಗುವುದರಿಂದ ಪ್ರಪಂಚದಾದ್ಯಂತ ಅಣುವಿದ್ಯುತ್ ಹಾಗೂ ಅಣುಬಾಂಬುಗಳ ತಯಾರಿಕೆಯಲ್ಲಿ ಮುಖ್ಯ ಕಚ್ಚಾವಸ್ತುವಾಗಿದೆ. ನಾಗರಿಕ ವಲಯದಲ್ಲಿ ಯುರೇನಿಯಂ ಮುಖ್ಯ ಬಳಕೆಯ ಅಣು ಸ್ಥಾವರಗಳ ಇಂಧನವಾಗಿದೆ. ವಾಣಿಜ್ಯ ಅಣು ಸ್ಥಾವರಗಳಲ್ಲಿ ಸಾಮಾನ್ಯವಾಗಿ ಸುಮಾರು 3% ಯುರೇನಿಯಂ-235 ಇರುವ ಯುರೇನಿಯಂ ಲೋಹವನ್ನು ಇಂಧನವಾಗಿ ಬಳಸಲಾಗುತ್ತದೆ.
ಪ್ಲುಟೋನಿಯಮ್ ಒಂದು ವಿಕಿರಣಶೀಲ ಮೂಲಧಾತು. ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹವಾದರೂ, ಪ್ರಕೃತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುವುದನ್ನು ೧೯೭೧ರಲ್ಲಿ ಕಂಡುಹಿಡಿಯಲಾಯಿತು. ಇದಕ್ಕೆ ಸುಮಾರು ೧೫ ಸಮಸ್ಥಾನಿ(isotope) ಇದೆ. ಅದರಲ್ಲಿ Pu-೨೩೯ ಎನ್ನುವ ಸಮಸ್ಥಾನಿ ಕ್ಷಿಪ್ರವಾಗಿ ವಿದಳನ ಹೊಂದುವುದರಿಂದ ಅಣು ಬಾಂಬ್ ಗಳ ತಯಾರಿಕೆಯಲ್ಲಿ ಹಾಗೂ ಅಣು ವಿದ್ಯುತ್ ಸ್ಥಾವರಗಳಲ್ಲಿ ಇಂಧನವಾಗಿ ಉಪಯೋಗಿಸಲ್ಪಡುತ್ತಿದೆ. ಇದನ್ನು ೧೯೪೦ರಲ್ಲಿ ಅಮೆರಿಕದ ವಿಜ್ಞಾನಿಗಳು ಸೃಷ್ಟಿಸಿದರು.
ಬಿಗ್-ಬ್ಯಾಂಗ್ ಸಿಧಾಂತದ ಪ್ರಕಾರ, ವಿಶ್ವವು ಕ್ಷಣಾರ್ದದಲ್ಲಿ ಹುಟ್ಟಿಕೊಂಡಿತು ಎನ್ನುವರು ವಿಜ್ಞಾನಿಗಳು. ವಿಶ್ವವು ಪಸರಿಸುತ್ತಾ ಸಾಗಿದೆಯಂತೆ. ಮೊದಲು ಸ್ರಷ್ಠಿಯಾದದ್ದು ಲಕ್ಷಾಂತರ ಗೆಲಾಕ್ಸಿಗಳು. ಈ ಗೆಲಾಕ್ಸಿಗಳು ಲಕ್ಷಾಂತರ ನಕ್ಷೆತ್ರಗಳ ಸಮೂಹಗಳು. ವಿಶ್ವದಲ್ಲಿ ಕಂಡುಬರುವ ಎಲ್ಲಾ ನಕ್ಷತ್ರಗಳ ಪ್ರಧಾನ ದ್ರವ್ಯವು: ಕೇವಲ ಹೈಡ್ರೋಜೆನ್, ಹೀಲಿಯಂ ಹಾಗೂ ಸ್ವಲ್ಪ ಪ್ರಮಾಣದ ಲಿಥಿಯಂ ಗಳು ಮಾತ್ರ.
ನಕ್ಷೆತ್ರಗಳು ತಮ್ಮ ಪ್ರಕಾಶ ಬೀರುವ ಶಕ್ತಿ ಕಳೆದುಕೊಂಡಾಗ,
ಕೆಂಪು ಕುಳಿಗಳಾಗಿ ರೂಪಾಂತರ ವಾಗುತ್ತವೆಯಂತೆ. ಈ ಸ್ಥಿತಿಯಲ್ಲಿ ನಕ್ಷೆತ್ರದ
ಕೇಂದ್ರದಲ್ಲಿ ಅಪಾರ ಉಷ್ಣ ಹಾಗೂ ಒತ್ತಡ ಉಂಟಾದಾಗ ಹಗುರವಾದ ಪರಮಾಣುಗಳು ಒತ್ತಡಕ್ಕೆ
ಒಳಪಟ್ಟು ಭಾರವಾದ ಇಂಗಾಲ, ಆಮ್ಲಜನಕ, ಮ್ಯಾಗ್ನಿಷಿಯಂ, ಹೀಗೆ ಪರಮಾಣು ಸಂಖ್ಯ 26ರ
ವರೆಗೆ ಇರುವ (ಕಬ್ಬಿಣದ ಪರಮಾಣುವಿನ ವರೆಗಿನ), ಎಲ್ಲಾ ಪ್ರಕಾರದ ಧಾತುಗಳಾಗಿ ರೂಪಾಂತರ
ವಾಗುತ್ತವೆಯಂತೆ. ಕಬ್ಬಿಣ ಎಲ್ಲಕಿಂತ ಸ್ಥಿರವಾದ ಧಾತು ಎನ್ನುವರು. ಇದು ಕೆಂಪುಕುಳಿಯ
ಮಧ್ಯಭಾಗದಲ್ಲಿ ಸಂಗ್ರಹ ವಾಗುತ್ತದೆ ಯಂತೆ.
ಇನ್ನೂ, ಕಬ್ಬಿಣಕ್ಕಿಂತ ಭಾರವಾದ
ಮುಂದಿನ ಪರಮಾಣುಗಳು ಅಂದರೆ ತಾಮ್ರ, ಬೆಳ್ಳಿ, ಬಂಗಾರ, ಪಾದರಸ, ಶೀಸ, ಯುರೆನಿಯಂ,
ಆದಿಗಳು ಸೂಪರ್ನೋವಾ ಕಾಲದಲ್ಲಿ ಉಂಟಾಗುತ್ತವೆ ಎಂಬವಾದ ಮಂಡಿಸಲಾಗಿದೆ. ಸೂಪರ್ನೋವಾ
ಸಂಭವಿಸುವ ಕಾಲಮಿತಿ ಅತಿ ಕಡಿಮೆ ಇರುವುದರಿಂದ , ಭಾರವಾದ ಪರಮಾಣುಗಳು ಉಂಟಾಗಲು ಅತಿ
ಕಡಿಮ ವೇಳೆ ಲಭ್ಯ ಇರುತ್ತದೆ ಎನ್ನುತ್ತಾರೆ. ಹೀಗಾಗಿ ಭಾರವಾದ ಪರಮಾಣುಗಳು ಪ್ರಪಂಚದಲ್ಲಿ
ಅತೀ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆಯಂತೆ.
ಅಂದರೆ ನಾವು ಸೂಪರ್ನೋವಾ ಸಂಜಾತರೆ?
Standard Model [string theory ]:
ಆಧುನಿಕ
ವಿದ್ಯಮಾನಗಳನ್ನು ಕ್ವಾಂಟಮ್ ಸಿಧಾಂತದಲ್ಲಿ ನಿರೂಪಿಸುತ್ತಾರೆ. ಎಲೆಕ್ಟ್ರಾನ್ ಗಳು
ಏಕಕಾಲಕ್ಕೆ ಅಲೆಗಳ ಹಾಗು ಕಣಗಳ ಲಕ್ಷಣಗಳು ಹೊಂದಿವೆ ಎಂದು ಕ್ವಾಂಟಮ್ ಸಿದ್ದಂತ
ಹೇಳುತ್ತದೆ. ಬೆಳಕು ನಿರ್ದಿಷ್ಟ ಶಕ್ತಿಯ ಪೊಟ್ಟಣಗಳ ರೂಪದಲ್ಲಿ ಹರಿದುಬರುತ್ತದೆಯಂತೆ.
ಬೆಳಕನ್ನು ರಾಶಿ ಇಲ್ಲದ ಶಕ್ತಿಯ ಕಣ ಎನ್ನುತ್ತಾರೆ.
ಐನ್ಸ್ಟೇನರು ಫೋಟೋ -ವಿದ್ಯುತ್ ಪರಿಣಾಮ ವಿವರಿಸಲು, ಪ್ಲ್ಯಾಂಕರ E = hf ಸಮೀಕರಣ ಬಳಸಿದರು. ಐನ್ಸ್ಟೇನರ ಫೋಟೋ -ವಿದ್ಯುತ್ ಪರಿಣಾಮದ ಸಮೀಕರಣ Kmax =hf - ɸ ಎಂದಿದೆ. ಡಿ ಬ್ರಾಗ್ಲಿ ಯವರ ಚಲಿಸುವ ಎಲೆಕ್ಟ್ರಾನ್ ಕಣಕ್ಕೆ ಸಂಭಂದಿಸಿದ ಸಮೀಕರಣ λ = h/mv ಎಂದಿದೆ.
ಕ್ವಾಂಟಮ್ ಸಿಧಾಂತಕ್ಕಾಗಿ ಈ ಮೇಲಿನ ಮೂರೂ ಸಮೀಕರಣಗಳು ನೋಬಲ್ ಪಾರಿತೋಷಕ ಪಡೆದವು.
೧೯೨೬ರಲ್ಲಿ ಶ್ರೋಡಿಂಗರರ ಕ್ವಾನ್ಟಮ್ ಸಮೀಕರಣವು ಪರಮಾಣುವಿನ ಒಳರಚನೆ ವಿವರಿಸುವಲ್ಲಿ ಸಫಲವಾಯಿತು. ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸದ ಗುಟ್ಟು ರಟ್ಟಾಯಿತು.
iℏ ∂Ψ/∂t = −ℏ2/2m ∂2Ψ/∂x2 +V(x)Ψ(x,t).
ಶ್ರೋಡಿಂಗರರ ಸಮೀಕರಣದ ಅನ್ವಯ ಹೈಡ್ರೋಜನ್ ಪರಮಾಣುವಿನ ರಚನಾ ವಿನ್ಯಾಸ ಬಿಡಿಸಲು ಪೂರಕವಾಯಿತು. n ,l, m, ಎನ್ನುವ ಪರಸ್ಪರ ಸಂಭಂಧವುಳ್ಳ ಕ್ವಾನ್ಟಮ್ ಸಂಖ್ಯಗಳು ಹೊರಬಿದ್ದವು.
ವಿಶ್ವವು;
ಎಲೆಕ್ಟ್ರಾನ್, ನ್ಯೂಟ್ರಿನೊ, ಮತ್ತು ಕ್ವಾರ್ಕ್ ಎನ್ನುವ ಮೂಲಕಣಗಳಿಂದ ಆಗಿದೆ
ಎನ್ನುವರು. ಇದು ಮೂಲಕಣಗಳ ಲೋಕ. ಹಿಗ್ಸ್ ಭೋಜಾನ್ ಎನ್ನುವ ಕಣ, ವಸ್ತುವಿನ ರಾಶಿ
ಉಂಟಾಗಲು ಕಾರಣ ಎನ್ನುವರು. ಹನ್ನೆರಡು ವಿವಿಧ ಪ್ರಕಾರದ ಕಣಗಳಿಂದ, ಈ ವಿಶ್ವ
ಉಂಟಾಗಿದೆಯೆಂತೆ. ಡಿರಾಕ್ ಎನ್ನುವ ಗಣಿತಜ್ಞರು, ಈಗ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು
ವಿವರಿಸಬಲ್ಲ ಗಣಿತ ಸೂತ್ರವೊಂದನ್ನು ಹುಟ್ಟುಹಾಕಿದ್ದಾರಂತೆ.
---------------------------------------------------------------------------
ಪರಮಾಣು:
ಪರಮಾಣುಗಳ ರಚನೆಯನ್ನು ಆಧುನಿಕ ಕ್ವಾಂಟಂ ಭೌತಶಾಸ್ತ್ರ ವಿವರಿಸುತ್ತದೆ. ಪರಮಾಣುವಿನಲ್ಲಿ ಕೇಂದ್ರದಲ್ಲಿ ಬೀಜಕೇಂದ್ರ ಅಥವಾ ನ್ಯೂಕ್ಲಿಯಸ್ ಇರುತ್ತದೆ ಮತ್ತು ಇದು ಪಾಸಿಟಿವ್ ಅಥವಾ ಧನಾವೇಶ (ವಿದ್ಯುತ್ ಆವೇಶ)ವಿರುವ ಪ್ರೋಟಾನ್ ಮತ್ತು ತಟಸ್ಥ ಆವೇಶ ಇರುವ ನ್ಯೂಟ್ರಾನ್ ಎರಡನ್ನೂ ಒಳಗೊಂಡಿರ ಬಹುದು. ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳನ್ನು ಜೊತೆಯಾಗಿ ನ್ಯೂಕ್ಲಿಯಾನ್‌ಗಳೆಂದು ಕರೆಯಲಾಗುತ್ತದೆ. ತೀರ ಸರಳವಾದ ಹೈಡ್ರೋಜನ್ ಪರಮಾಣುವಿನಲ್ಲಿ ಪ್ರೋಟಾನ್ ಮಾತ್ರವಿರುತ್ತದೆ. ಉಳಿದೆಲ್ಲ ಧಾತುಗಳ ಪರಮಾಣುಗಳ ಬೀಜಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳೆರಡೂ ಇರುತ್ತವೆ. ಪ್ರೋಟಾನಿನ ದ್ರವ್ಯರಾಶಿಯು ಒಂದು ಪರಮಾಣು ದ್ರವ್ಯರಾಶಿ ಮಾನಕ (ಅಥವಾ ಅಟಾಮಿಕ್ ಮಾಸ್ ಯುನಿಟ್-ಎಎಮ್‌ಯು) ಮತ್ತು ನ್ಯೂಟ್ರಾನ್‌ನಿನ ದ್ರವ್ಯರಾಶಿಯು 1 ಎಎಮ್‌ಯುಗಿಂತ ತುಸು ಹೆಚ್ಚು. ಪರಮಾಣುವಿನ ಪ್ರೋಟಾನ್ ಸಂಖ್ಯೆಯು ಆ ಧಾತುವಿನ ಪರಮಾಣು ಸಂಖ್ಯೆಯೂ (ಅಟಾಮಿಕ್ ನಂಬರ್) ಹೌದು.
ಎಲೆಕ್ಟ್ರಾನ್‌ಗಳು ನೆಗಿಟಿವ್ ಅಥವಾ ರುಣಾವೇಶವನ್ನು (ಋಣಾವೇಶ) ಹೊಂದಿರುತ್ತವೆ. ಎಲೆಕ್ಟ್ರಾನ್‌ಗಳು ನ್ಯೂಕ್ಲಿಯೆಸ್ ಸುತ್ತಲೂ ಕಕ್ಷಕಗಳಲ್ಲಿ ಸುತ್ತುತ್ತವೆ. ಅವುಗಳ ವೇಗ ಬೆಳಕಿನ ವೇಗ ಅಥವಾ ಅದರ ಹತ್ತಿರ ಇರುವ ಕಾರಣಕ್ಕೆ ಕಕ್ಷಕದಲ್ಲಿ ಇಲ್ಲಿಯೇ ಇರುತ್ತವೆ ಎಂದು ಗುರುತಿಸುವುದು ಕಷ್ಟ. ಆದರೆ ಅದು ಇರಬಹುದಾದ ಸಾಧ್ಯ ಪ್ರದೇಶದ ಸಂಖ್ಯಾಶಾಸ್ತ್ರೀಯ ಸಾಧ್ಯತೆಯನ್ನು ಪಡೆಯಬಹುದು. ಒಂದು ಪ್ರೋಟಾನಿನ ರಾಶಿಗೆ 1836ರಷ್ಟು ಎಲೆಕ್ಟ್ರಾನ್ ಗಳ ದ್ರವ್ಯರಾಶಿಯು ಸಮ ಮತ್ತು ಒಂದು ನ್ಯೂಟ್ರಾನ್‌ನಿನ ರಾಶಿಗೆ 1839ರಷ್ಟು ಎಲೆಕ್ಟ್ರಾನ್ ಗಳ ದ್ರವ್ಯರಾಶಿಯು ಸಮ ಇರುತ್ತದೆ. ಪರಮಾಣುವಿನ ಅತ್ಯಂತ ಕೊನೆಯ ಕವಚದಲ್ಲಿರುವ ಎಲೆಕ್ಟ್ರಾನ್‌ಗಳಿಗೆ ವ್ಯಾಲೆನ್ಸ್ ಎಲೆಕ್ಟ್ರಾನ್‌ಗಳೆಂದು ಕರೆಯುತ್ತಾರೆ. ಇವು ರಸಾಯನಿಕ ಬಂಧನಗಳಲ್ಲಿ ಭಾಗವಹಿಸುತ್ತವೆ. ಹೀಗಾಗಿ ಒಂದೇ ವ್ಯಾಲೆನ್ಸಿ ಇರುವ ಧಾತುಗಳು ಒಂದೇ ರೀತಿಯ ರಸಾಯನಿಕ ಗುಣಗಳನ್ನು ಹೊಂದಿರುತ್ತವೆ.
ಪರಮಾಣು ತೂಕ ಮತ್ತು ಸಮಸ್ಥಾನಿಗಳು :
ಮೂಲಧಾತುವಿನ ಪರಮಾಣುಗಳಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳೂ ಎರಡೂ ಇರುತ್ತವೆ (ಜಲಜನಕದಲ್ಲಿ ಒಂದು ಪ್ರೋಟಾನ್ ಮಾತ್ರ ಇರುತ್ತದೆ). ಮೂಲಧಾತುವಿನ ಪರಮಾಣು ಒಂದರಲ್ಲಿ ಪ್ರೋಟಾನ್ ಸಂಖ್ಯೆ ಏರುಪೇರಾಗುವುದಿಲ್ಲ ಆದರೆ ನ್ಯೂಟ್ರಾನ್ ಸಂಖ್ಯೆ ಹೆಚ್ಚು ಕಡಿಮೆಯಾಗ ಬಹುದು. ಉದಾಹರಣೆಗೆ ಇಂಗಾಲದಲ್ಲಿ 6 ಪ್ರೋಟಾನುಗಳಿರುತ್ತವೆ. ಸಾಮಾನ್ಯವಾಗಿ ಇಂಗಾಲದ ನ್ಯೂಕ್ಲಿಯಸ್‌ನಲ್ಲಿ 6 ನ್ಯೂಟ್ರಾನ್‌ಗಳಿರುತ್ತವೆ. ಹೀಗಾಗಿ ಅದನ್ನು 12C ಎಂದು ಸಂಕೇತಿಸಲಾಗುತ್ತದೆ. ಆದರೆ ಪ್ರಕೃತಿಯಲ್ಲಿ ಇನ್ನೊಂದು ಸ್ಥಿರ ಇಂಗಾಲದ ಪರಮಾಣುವೂ ಇದ್ದು ಅದು ಇಂಗಾಲ-13 ಅಥವಾ (13C) ಎಂದು ಕರೆಯಿಸಿಕೊಳ್ಳುತ್ತದೆ. ಇಂತಹ ನ್ಯೂಟ್ರಾನ್ ಸಂಖ್ಯೆಯಲ್ಲಿ ಭಿನ್ನವಾದ ಮೂಲಧಾತುವನ್ನು ಸಮಸ್ಥಾನಿ (ಐಸೊಟೋಪ್) ಎಂದು ಕರೆಯಲಾಗುತ್ತದೆ.
ಪರಮಾಣು ತೂಕ ಅಥವಾ ಸಾಕ್ಷೇಪಿಕ ಪರಮಾಣು ದ್ರವ್ಯರಾಶಿ (ರಿಲೇಟಿವ್ ಆಟಮಿಕ್ ಮಾಸ್) ಒಂದು ರಸಾಯನಿಕ ಮೂಲಧಾತುವಿನ ಸರಾಸರಿ ರಾಶಿ ಹಾಗೂ ಒಂದು ನಿರ್ದಿಷ್ಟ ಪ್ರಮಾಣಬದ್ಧ ಮಾನಕಕ್ಕೆ ಇರುವ ಅನುಪಾತ. 1961ರಿಂದ ಈ ಪ್ರಮಾಣಬದ್ಧ ಮಾನಕವನ್ನಾಗಿ ಕಾರ್ಬನ್-12ರ ಪರಮಾಣುವಿನ ದ್ರವ್ಯರಾಶಿಯ ಹನ್ನೆರಡನೆ ಒಂದು ಭಾಗವನ್ನು ಬಳಸಲಾಗುತ್ತಿದೆ. ಉದಾಹರಣೆಗೆ ಹೀಲಿಯಂನ ಪರಮಾಣು ತೂಕ 4.002602 ಮತ್ತು ಈ ಸರಾಸರಿಯು ವಿಪುಲವಾಗಿರುವ ಆ ಮೂಲಧಾತುವಿನ ಸಮಸ್ಥಾನಿಗಳ ಅನುಪಾತವನ್ನು ಪ್ರತಿಬಿಂಬಿಸುತ್ತದೆ.
ಪರಮಾಣು ರಚನೆ:
- ಸಾಮಾನ್ಯ ವಸ್ತುವಿನ ಅತ್ಯಂತ ಚಿಕ್ಕ ಘಟಕವೇ ಒಂದು ಪರಮಾಣು. ಈ ಅಂಶ (ಘಟಕ) ರಾಸಾಯನಿಕ ಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಘನ, ದ್ರವ, ಅನಿಲ, ಮತ್ತು ಪ್ಲಾಸ್ಮಾ - ಇವು ತಟಸ್ಥ ಅಥವಾ ಅಯಾನೀಕೃತ ಪರಮಾಣುಗಳಿಂದ ಕೂಡಿದೆ. ಆ ವಸ್ತುಗಳ ಗುಣ-ಲಕ್ಷಣಗಳನ್ನು ಹೊಂದಿದೆ.
- ಪರಮಾಣುಗಳು ವಿಶಿಷ್ಟ ಗಾತ್ರಗಳ ಚಿಕ್ಕ ಘಟಕಗಳು. ಇವುಗಳ ಗಾತ್ರ 100 ಪಿ.ಎಮ್. (ಒಂದು ಮೀಟರ್’ನ ಹತ್ತು ಶತಕೋಟಿಯ ಒಂದು ಅಂಶ, ಸಣ್ಣ ಮಾಪನದಲ್ಲಿ) ಸುತ್ತ ಇರುತ್ತದೆ.
- ಜಲಜನಕದ ಪರಮಾಣುವಿನಲ್ಲಿ ಒಂದೇ ಪ್ರೋಟಾನ್ ಇದ್ದರೆ, ಹೀಲಿಯಂ ಬೀಜದಲ್ಲಿ 2 ಪ್ರೋಟಾನ್,2 ನ್ಯೂಟ್ರಾನ್'ಗಳಿವೆ,-ಅದಕ್ಕೆ ಪ್ರದಕ್ಷಿಣೆ ಹಾಕುವ ಎಲೆಕ್ಟ್ರಾನ್ ಗಳು ಎರಡು. ಆಮ್ಲಜನಕದ ಬೀಜದಲ್ಲಿ 8 ಪ್ರೋಟಾನ್ ಇದ್ದರೆ, 8ನ್ಯೂಟ್ರಾನ್'ಗಳಿವೆ. ಈ ಬೀಜವನ್ನು 8 ಎಲೆಕ್ಟ್ರಾನ್'ಗಳು ಬೇರೆ ಬೇರೆ ಪಥಗಳಲ್ಲಿ ಸುತ್ತುತ್ತವೆ. ಬೀಜಗಳಲ್ಲಿರುವ ಕಣಗಳ ಒಟ್ಟು ಸಂಖ್ಯೆಯನ್ನು (ಪ್ರೋಟಾನ್+ನ್ಯೂಟ್ರಾನ್) 'ಪರಮಾಣೂ-ಭಾರಾಂಕ'ವೆಂದೂ (Atomic weight-mass number=ತೂಕ), ಕೇವಲ ಪ್ರೋಟಾನಗಳ ಸಂಖ್ಯೆಯನ್ನು 'ಪರಮಾಣು-ಅಂಕ'ವೆಂದೂ (atomic number =ಅಣು ಸಂಖ್ಯೆ) ಕರೆಯುವರು. ಹೀಗೆ ಜಲಜನಕದ ಭಾರಾಂಕ 1; ಕ್ರಮಾಂಕವೂ 1. ಆಮ್ಲಜನಕದ ಭಾರಾಂಕ 16; ಕ್ರಮಾಂಕ 8. (ಪ್ರೋಟಾನ್ 8+ನ್ಯೂಟ್ರಾನ್ 8); ಇಂಗಾಲದ್ದು 12 ಮತ್ತು 6.
- ಈ ಪರಮಾಣುಗಳನ್ನು ಗುರುತಿಸುವುದು ಅದರ ಪರಮಾಣು ಅಂಕವನ್ನು ನೋಡಿ. ಈ ಅಂಕವನ್ನು ಗುರುತಿಸುವಲ್ಲಿ ಪರಮಾಣುವಿನ ಕವಚದಂತಿರುವ ಸುತ್ತುವ ಎಲೆಕ್ಟ್ರಾನ್'ಗಳು ಪ್ರಾಮುಖ್ಯವಾಗುತ್ತವೆ. ಭಾರಾಂಕವು ಅದರಲ್ಲಿರುವ ನ್ಯೂಟ್ರಾನ್ ಮತ್ತುಪ್ರೋಟಾನಗಳ ಪರಮಾಣು ಭಾರವನ್ನು ಗುರುತಿಸಲು ಬೇಕು. ಇದರಲ್ಲಿ ಒಂದು ತೊಡಕಿದೆ. ಒಂದೇ ಬಗೆಯ ಮೂಲ ಧಾತು ಎರಡು ಬಗೆಯ ಪರಮಾಣುಗಳಿಂದ ಆಗಬಹುದು! ಬೆಳ್ಳಿಯ ಧಾತುವಿನಲ್ಲಿ 47 ಪ್ರೋಟಾನ್,60 ನ್ಯೂಟ್ರಾನ್'ಗಳ ಮತ್ತು 47ಪ್ರೋಟಾನ್ ಇದ್ದರೆ,62 ನ್ಯೂಟ್ರಾನ್'ಗಳ ಬೀಜಗಳೂ ಇವೆ. ಈ ಎರಡುಬಗೆಯ ಬೀಜಗಳಲ್ಲೂ 47 ಎಲೆಕ್ಟ್ರಾನ್'ಗಳು ಸುತ್ತುತ್ತವೆ.ಈ ಎರಡೂ ಬೆಳ್ಳಿಯ ಪರಮಾಣುಗಳಂತೆಯೇ ಕಾಣುತ್ತವೆ.ನಮಗೆ ಸಿಗುವುದು ಇವೆರಡರ ಸಮ್ಮಿಳಿತದ್ದೇ-ಅವನ್ನು ಪ್ರತ್ಯೇಕಿಸುವುದು ಸುಲಭಸಾಧ್ಯವಲ್ಲ. ಇವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ 107 ಮತ್ತು 108 'ಬೆಳ್ಳಿಯ-ಸಮಸ್ಥಾನೀಯ'(Isotope) ಪರಮಾಣುಗಳೆಂದು ಕರೆಯುತ್ತಾರೆ. ಈ ಬಗೆಯ ಸಮಸ್ಥಾನೀಯ'(Isotope) ಧಾತುಗಳು ಬಹಳ ಇವೆ. 92 ಪರಮಾಣುಗಳಲ್ಲಿ 81ರಿಂದ ಮುಂದಿನವು ವಿಕಿರಣಶೀಲವಾದವು. ಎಂದರೆ ಅದರ ಬೀಜಗಳು ತಾವಾಗಿಯೇ ಸಿಡಿದು ಕಣಗಳನ್ನು ಚಿಮ್ಮುತ್ತವೆ. ಇವು ಸ್ವಯಂ-ಸ್ಪೋಟಕ ಅಥವಾ ಸಹಜ ವಿಕಿರಣಶೀಲ-ಪರಮಾಣುಗಳು (Natural radio active Atoms).ಇವು ರೇಡಿಯೊ ಆಕ್ಟಿವ್ ಮೂಲಧಾತುಗಳು ಅಥವಾ ಮೂಲವಸ್ತುಗಳು- ಇವು ಎಚ್ಚರಿಕೆ ವಹಿಸದೆ ಉಪಯೋಗಿಸಿದರೆ ಮಾನವನಿಗೆ (ಪ್ರಾಣಿಗಳಿಗೆ) ಅಪಾಯಕಾರಿ ವಿಕಿರಣಶೀಲ-ಧಾತುಗಳು (radio active elements).
- ನಮಗೆ ಭೂಮಿಯಲ್ಲಿ/ಪ್ರಕೃತಿಯಲ್ಲಿ ಸಹಜವಾಗಿ 92 ಪರಮಾಣು ಧಾತುಗಳು ಸಿಕ್ಕಿವೆ (1952); ನಂತರ ಕಂಡುಹಿಡಿದವು ಮತ್ತು ಪ್ರಯೋಗದಿಂದ ಸೃಷ್ಟಿಸಿದವು ಸೇರಿ 118 ಧಾತುಗಳು ಲಭ್ಯವಿವೆ(2013).ಇವುಗಳಲ್ಲಿ ಕೆಲವು ಅಭದ್ರ ಪರಮಾಣುಗಳು.
ಧಾತು, ಅಣು. ರಸಾಯನಿಕ ಸಂಯುಕ್ತ, ಮಿಶ್ರಣ:
ಧಾತುಗಳು ಒಂದೇ ರೀತಿಯ ಪರಮಾಣುಗಳನ್ನು ಹೊಂದಿರುತ್ತವೆ ಮತ್ತು ಈ ಪರಮಾಣುಗಳಲ್ಲಿ ಒಂದೇ ಸಂಖ್ಯೆಯ ಪ್ರೋಟಾನುಗಳಿರುತ್ತವೆ. ಇವು ರಾಸಾಯನಿಕವಾಗಿ ತೀರ ಸರಳ ಘಟಕಗಳು ಮತ್ತು ಅವನ್ನು ರಾಸಾಯನಿಕ ವಿಧಾನ ಅಥವಾ ಪದ್ಧತಿಯ ಮೂಲಕ ವಿಭಜಿಸಲು ಬರುವುದಿಲ್ಲ. ಅಣು ಧಾತುವೊಂದರ ಅಥವಾ ರಾಸಾಯನಿಕ ಸಂಯುಕ್ತವೊಂದರ ಅತಿಸಣ್ಣ ಕಣ. ಅವು ಆಮ್ಲಜನಕಗಳ ಅಣುವಿನಂತೆ ಒಂದೇ ಮೂಲಧಾತುಗಳನ್ನು ಹೊಂದಿರಬಹುದು ಅಥವಾ ನೀರಿನ ಅಣುವಿನಂತೆ ಒಂದಕ್ಕೂ ಹೆಚ್ಚು ಮೂಲಧಾತುಗಳನ್ನು ಒಳಗೊಂಡಿರ ಬಹುದು. ಅಣುವಿನಲ್ಲಿ ಒಂದಕ್ಕಿಂತ ಹೆಚ್ಚು ಪರಮಾಣುಗಳಿರುತ್ತವೆ ಮತ್ತು ಇವು ಸಾಮಾನ್ಯವಾಗಿ ಅಯಾನಿಕ್ ಬಂಧ, ಸಹವೇಲೆನ್ಸಿ ಬಂಧ ಮುಂತಾದ ರಸಾಯನಿಕ ಬಂಧಗಳಿಂದ ಬಂದಿತವಾಗಿರುತ್ತವೆ.
ರಾಸಾಯನಿಕ ಸಂಯುಕ್ತಗಳು (ಅಥವಾ ಸರಳವಾಗಿ ಸಂಯುಕ್ತ) ಒಂದಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬಂಧಿಸಲ್ಪಟ್ಟ ಪದಾರ್ಥಗಳು ಮತ್ತು ಇವನ್ನು ಇವು ಒಳಗೊಂಡ ಮೂಲ ಧಾತುಗಳಾಗಿ ಬೇರ್ಪಡಿಸಬಹುದು. ಇವುಗಳ ಗುಣಗಳು ಇವು ಒಳಗೊಂಡ ಮೂಲಧಾತುಗಳ ಗುಣಗಳಿಗಿಂತ ಬೇರೆಯಾಗಿರ ಬಹುದು. ಇವು ಯಾವಾಗಲೂ ಒಂದೇ ಅನುಪಾತದಲ್ಲಿ ಪರಮಾಣುಗಳನ್ನು ಹೊಂದಿರುತ್ತವೆ. ಹೈಡ್ರೊಜನ್ ಅಥವಾ ಜಲಜನಕದ ಎರಡು ಪರಮಾಣುಗಳು ಮತ್ತು ಆಕ್ಸಿಜನ್ ಅಥವಾ ಆಮ್ಲಜನಕದ ಒಂದು ಪರಮಾಣು ಇರುವ ನೀರು ಇದಕ್ಕೊಂದು ಉದಾಹರಣೆ. ಮಿಶ್ರಣವು ಎರಡೂ ಅಥವಾ ಹೆಚ್ಚು ಧಾತುಗಳ ಅಥವಾ/ಮತ್ತು ಸಂಯುಕ್ತಗಳ ಭೌತಿಕ ಮಿಶ್ರಣ. ಇವನ್ನು ಭೌತಿಕ ಪದ್ಧತಿಗಳ ಮೂಲಕ ಬೇರ್ಪಡಿಸ ಬಹುದು ಮತ್ತು ಇವುಗಳ ಘಟಕಗಳು ಬಹಳಷ್ಟು ಸಲ ತಮ್ಮ ಮೂಲ ಗುಣಗಳನ್ನು ಉಳಿಸಿಕೊಂಡಿರುತ್ತವೆ. ಗಾಳಿ, ಮಿಶ್ರ ಲೋಹ (ಅಲಾಯ್) ಇದಕ್ಕೆ ಉದಾಹರಣೆಗಳು.
ಲೋಹಗಳು:
ಲೋಹ ಎಂದರೆ ರಸಾಯನಶಾಸ್ತ್ರ ದಲ್ಲಿ ಮೂಲಧಾತುಗಳಲ್ಲಿ ಒಂದು ಪ್ರಕಾರ. ಸುಮಾರು ಎಂಬತ್ತು ಶೇಕಡಾ ಮೂಲಧಾತುಗಳು ಲೋಹಗಳ ವರ್ಗಕ್ಕೆ ಸೇರುತ್ತವೆ. ಲೋಹಗಳು ಇತರೆ ಮೂಲಧಾತುಗಳಿಗಿಂತ ಹಲವಾರು ರೀತಿಯಲ್ಲಿ ಭಿನ್ನವಾಗಿವೆ. ಲೋಹಗಳಿಗೆ ಹೊಳಪು ಇದೆ. ಹೆಚ್ಚಿನ ಲೋಹಗಳು ಬೆಳಕನ್ನು ಪ್ರತಿಫಲಿಸುತ್ತವೆ. ಇವುಗಳು ಶಾಖ ಹಾಗೂ ವಿದ್ಯುತ್ ನ ಉತ್ತಮ ವಾಹಕಗಳು. ಇವುಗಳನ್ನು ತೆಳು ಹಾಳೆಗಳನ್ನಾಗಿ ಪರಿವರ್ತಿಸಬಹುದು ಹಾಗೂ ಉದ್ದವಾದ ಸರಿಗೆಗಳನ್ನಾಗಿಸಬಹುದು.
ರಾಸಾಯನಿಕವಾಗಿ ಹೆಚ್ಚು ಕ್ರಿಯಾಪಟುತ್ವ ಹೊಂದಿದ ಧಾತುಗಳು ತಮಗಿಂತ ಕಡಿಮೆ ಕ್ರಿಯಾಪಟುತ್ವ ಹೊಂದಿದ ಧಾತುತಾಳನ್ನು ಅವುಗಳ ದ್ರಾವಣ / ದ್ರವಿಸಿದ ಸಂಯುಕ್ತದಿಂದ ಸ್ತಳಾಂತರಿಸುತ್ತವೆ. ಲೋಹಗಳ ಕ್ರಿಯಾಶೀಲ ಸರಣಿ; K > Na > Ca > Mg > Al > Zn > Fe > Pb > Cu > Hg > Ag > Au.
ರಾಸಾಯನಿಕ ವೈಶಿಷ್ಟ್ಯಗಳು:
- ಲೋಹಗಳು ಇಲೆಕ್ಟ್ರಾನ್ ದಾನಿಗಳು ಆದುದರಿಂದ ಇವುಗಳು ವಿದ್ಯುತ್ ಧನೀಯ (electro Positive)ವಾಗಿರುತ್ತದೆ.
- ಲೋಹಗಳು ಸಾಮಾನ್ಯವಾಗಿ ಅಯಾನಿಕ್ ಬಂಧಗಳನ್ನು(Ionic bonding) ಉಂಟುಮಾಡುತ್ತವೆ
- ಸಾಮಾನ್ಯವಾಗಿ ಸಾರತೆ ಕಡಿಮೆ ಇರುವ ಆಮ್ಲಗಳಿಂದ(dilute acids) ಹೈಡ್ರೋಜನ್ನ್ನು ಸ್ಥಾನ ಪಲ್ಲಟಗೊಳಿಸುತ್ತದೆ
- ಲೋಹಗಳ ಆಕ್ಸೈಡ್ ಗಳು ಪ್ರತ್ಯಾಮ್ಲೀಯ ಗುಣವನ್ನು ಹೊದಿರುತ್ತವೆ. ಆದುದರಿಂದ ಕೆಂಪು ಲಿಟ್ಮಸ್ ನ್ನು ನೀಲಿ ಮಾಡುತ್ತದೆ.
- ಲೋಹಗಳ ಆಕ್ಸೈಡ್ ಗಳು ಕೆಲವು ಜಲೀಯ ದ್ರಾವಣಗಳು ಸತುವಿನೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಕೊಡುತ್ತದೆ.
- ಲೋಹಗಳೋಡನೆ ಗಾಳಿಯ ವರ್ತನೆ: ಲೋಹದಿಂದ ಮಾಡಿದ ಅನೇಕ ವಸ್ತುಗಳು ಬಹುದಿನಗಳ ಕಾಲ ಗಾಳಿಗೆ ತೆರೆದಿಟ್ಟಾಗ ತಮ್ಮ ಹೊಳಪು ಮೇಲ್ಮೈ ಕಳೆದುಕೊಳ್ಳುತ್ತವೆ. ಅವುಗಳನ್ನು ಹುಣಿಸೆ ಹಣ್ಣು ಅಥವಾ ಸೌಮ್ಯ ಆಮ್ಲೀಯ ರಾಸಾಯನಿಕಗಳಿಂದ ಸ್ವಚ್ಚಗೊಳಿಸಬಹುದು. ಇದಕ್ಕೆ ಕಾರಣವೆಂದರೆ ಲೋಹಗಳು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಆಕ್ಸೈಡುಗಳಾಗಿ ವರ್ತಿಸುತ್ತದೆ. ಗಾಳಿಗೆ ಬಹುದಿನಗಳ ಕಾಲ ತೆರೆದಿಟ್ಟ ಅಲ್ಯೂಮಿನಿಯಂ ನ ಪಾತ್ರೆಯ ಮೇಲ್ಮೈ ಬಿಳಿ-ಬೂದಿ ಬಣ್ಣಕ್ಕೆ ತಿರುಗಿರುವುದನ್ನು ನೀವು ಗಮನಿಸಿರಬಹುದು. ಇದೇ ಕಾರಣಕ್ಕಾಗಿ ಲಿಂಬೆ ರಸ ಅಥವಾ ಹಣ್ಣಿನ ರಸವನ್ನಾಗಲೀ, ಉಪ್ಪಿನ ಕಾಯಿಯನ್ನಾಗಲೀ ಅಲ್ಯೂಮೀನಿಯಂ ಡಬ್ಬಿಗಳಲ್ಲಿ ಸಂಗ್ರಹಿಸಬಾರದು ಎಂದು ಹೇಳುತ್ತಾರೆ.
- ಲೋಹಗಳ ಮೇಲೆ ಇತರ ಅಲೋಹಗಳ ವರ್ತನೆ:ಕೆಲವು ಲೋಹಗಳು ಉನ್ನತ ತಾಪದಲ್ಲಿ ನೈಟ್ರೋಜನ್ನಿನೊಂದಿಗೆ ವರ್ತಿಸಿ ಆಯಾ ನೈಟ್ರೈಡುಗಳನ್ನು ಕೊಡುತ್ತವೆ.ಲೋಹಗಳು ಸಾಮಾನ್ಯವಾಗಿ ಹೈಡ್ರೋಜನ್ನಿನೊಂದಿಗೆ ವರ್ತಿಸಿ ಆಯಾ ಹೈಡ್ರೈಡುಗಳನ್ನು ಕೊಡುತ್ತದೆ.ಲೋಹಗಳು ಸಾಮಾನ್ಯವಾಗಿ ಕ್ಲೋರಿನ್ನಿನೊಂದಿಗೆ ವರ್ತಿಸಿ ಆಯಾ ಕ್ಲೋರೈಡುಗಳನ್ನು ಕೊಡುತ್ತದೆ.ಲೋಹಗಳು ಸಾಮಾನ್ಯವಾಗಿ ಗಂಧಕದೊಂದಿಗೆ ವರ್ತಿಸಿ ಆಯಾ ಸಲ್ಫೈಡುಗಳನ್ನು ಕೊಡುತ್ತದೆ.
- ಲೋಹಗಳ ಮೇಲೆ ನೀರಿನ ವರ್ತನೆ: ಸಾಮಾನ್ಯವಾಗಿ ನಾವು ನೀರನ್ನು ಲೋಹಗಳ (ತಾಮ್ರದ ಹಂಡೆ, ಕಬ್ಬಿಣದ ನೀರಿನ ಹಂಡೆ, ಬೆಳ್ಳಿಯ ಲೋಟ, ತಾಮ್ರದ ತಂಬಿಗೆ.. ಇತ್ಯಾದಿ)ಪಾತ್ರೆಯಲ್ಲಿಯೇ ಸಂಗ್ರಹಿಸುತ್ತೇವೆ. ಮತ್ತು ಆ ಪಾತ್ರೆಗಳಲ್ಲಿಯೇ ಕಾಯಿಸುತ್ತೇವೆ. ಇದರರ್ಥ ಲೋಹಗಳು ನೀರಿನೊಂದಿಗೆ ವರ್ತಿಸುವುದಿಲ್ಲ ಎಂಬುದಾಗಿದೆ. ಆದರೆ ಇದಕ್ಕೆ ಅಪವಾದವೆಂಬಂತೆ, ಸೋಡಿಯಂ ಲೋಹವು ನೀರಿನೊಂದಿಗೆ ಬಹಳ ದಿಢೀರನೇ ವರ್ತಿಸಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ಉತ್ಪತ್ತಿಸುತ್ತದೆ. (ಎಚ್ಚರಿಕೆ: ತಣ್ಣೀರಿನಲ್ಲಿ ಸೋಡಿಯಂ ಲೋಹವನ್ನು ಹಾಕಿದರೆ ಆಸ್ಪೋಟಿಸುತ್ತದೆ.). ಆದರೆ ಮೇಗ್ನೀಶೀಯಂ ಲೋಹವು ಬಿಸಿ ನೀರಿನಲ್ಲಿ ವರ್ತಿಸಿ ಮೇಗ್ನೀಶಿಯಂ ಆಕ್ಸೈಡ್ ಉತ್ಪತ್ತಿಯಾಗುತ್ತದೆ.. ಚಿನ್ನ ಮತ್ತು ಪ್ಲಾಟಿನಂ ಲೋಹವು ನೀರಿನೊಂದಿಗೆ ವರ್ತಿಸುವುದೇ ಇಲ್ಲ. ಆದುದರಿಂದ ಚಿನ್ನದ ಆಥವಾ ಲೋಹದ ಆಭರಣವನ್ನು ನೀರಿನಲ್ಲಾಗಲೀ, ಬಿಸಿ ನೀರಿನಲ್ಲಾಗಲೀ ತೊಳೆದು ಸ್ವಚ್ಛಗೊಳಿಸಬಹುದಾಗಿದೆ.
- ಲೋಹಗಳ ಮೇಲೆ ಆಮ್ಲಗಳ ವರ್ತನೆ:-ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಸತು, ಅಲ್ಯೂಮಿನಿಯಂ, ಮೇಗ್ನಶೀಯಂ ಮುಂತಾದ ಲೋಹಗಳು ವರ್ತಿಸಿ ಲೋಹದ ಕ್ಲೋರೈಡುಗಳು ರೂಪುಗೊಳ್ಳುತ್ತದೆ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಗೊಳ್ಳುತ್ತದೆಸಾರರಿಕ್ತ ಸಲ್ಪ್ಯೂರಿಕ್ ಆಮ್ಲದೊಡನೆ ಸತು, ಮೇಗ್ನೀಶೀಯಂ, ಕಬ್ಬಿಣ ಮುಂತಾದ ಆಮ್ಲಗಳು ವರ್ತಿಸಿ ಆಯಾ ಸಲ್ಪೇಟುಗಳನ್ನು ಉಂಟುಮಾಡಿ ಹೈಡ್ರೋಜನ್ ಅನಿಲವನ್ನು ಬಿಡುಗಡೆಗೊಳಿಸುತ್ತದೆ.ಸಾರರಿಕ್ತ ನೈಟ್ರಿಕ್ ಆಮ್ಲವೂ ಕೂಡಾ ಸತು, ಮೇಗ್ನಿಶೀಯಂ, ಕಬ್ಬಿಣ ಮುಂತಾದ ಲೋಹಗಳೊಂದಿಗೆ ವರ್ತಿಸಿ ಆಯಾ ನೈಟ್ರೇಟುಗಳನ್ನು ಉಂಟುಮಾಡಿ ಹೈಡ್ರೋಜನ್ನ ಅನಿಲವನ್ನು ಬಿಡುಗಡೆಗೊಳಿಸುತ್ತದೆ.(ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ತುಂಡನ್ನು ಸಾರಯುತ ನೈಟ್ರಿಕ್ ಆಮ್ಲದಲ್ಲಿ ಮುಳುಗಿಸಿದಾಗ ಯಾವುದೇ ಪರಿವರ್ತನೆ ಉಂಟಾಗುವುದಿಲ್ಲ, ಏಕೆಂದರೆ ನೈಟ್ರಿಕ್ ಆಮ್ಲದಲ್ಲಿದ್ದಾಗ ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ಆಕ್ಸೈಡುಗಳ ಮೇಲ್ಮೈ ಪದರ ಉಂಟಾಗಿ ಅವು ನಿಷ್ಕ್ರಿಯವಾಗುತ್ತವೆ.)
- ಲೋಹಗಳ ಸ್ಥಾನಪಲ್ಲಟ ಕ್ರಿಯೆಗಳು:- ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣವು ವರ್ತಿಸಿ ಕಬ್ಬಿಣದ ಸಲ್ಪೇಟ್ ಹಾಗೂ ತಾಮ್ರವು ಉತ್ಪಾದನೆಗೊಳ್ಳುತ್ತದೆ. ಹೀಗೆ ಹಲವಾರು ಲೋಹಗಳ ಸ್ಥಾನಪಲ್ಲಟ ಕ್ರಿಯೆಯನ್ನು ಗಮನಿಸಬಹುದಾಗಿದೆ.
ಮುಖ್ಯವಾಗಿ ಗುರಿತಿಸಲ್ಪಡುವ ಲೋಹಾಭಗಳು:
ಸಾಮಾನ್ಯವಾಗಿ ಗುರುತಿಸಲ್ಪಡುವ ಆರು ಮುಕ್ಯವಾದ ಲೋಹಾಭಗಳೆಂದರೆ
- ಬೋರಾನ್
- ಸಿಲಿಕಾನ್
- ಜರ್ಮೇನಿಯಂ
- ಆರ್ಸೆನಿಕ್
- ಆಂಟಿಮೊನಿ
- ಟೆಲ್ಲರಿಯಂ
ಲೊಹಾಭಗಳ ಗುಣಗಳನ್ನು ತೋರುವ ಇತರ ಮೂಲವಸ್ತುಗಳು
- ಇಂಗಾಲ
- ಅಲ್ಯೂಮಿನಿಯಂ
- ಸೆಲೆನಿಯಂ
- ಪೊಲೊನಿಯಂ
- ಆಸ್ಟಾಟಿನ್
ಲೋಹಾಭಗಳ ಗುಣಲಕ್ಷಣಗಳು:
ಲೋಹಾಭಗಳು ಸಾಮಾನ್ಯವಾಗಿ ನೋಡಲು ಲೋಹಗಳಂತೆ ಕಾಣುತ್ತವೆ. ಆದರೆ ಅವು ಕಠಿಣವಾಗಿದ್ದು ಉತ್ತಮ ವಿದ್ಯುತ್ ವಾಹಕಗಳಾಗಿರುತ್ತವೆ. ಆದರೆ ರಾಸಾಯನಿಕವಾಗಿ ಅವು ಸಾಮಾನ್ಯವಾಗಿ ಅಲೋಹಗಳಂತೆ ವರ್ತಿಸುತ್ತವೆ. ಅವು ಲೋಹಗಳೊಂದಿಗೆ ಸೇರಿ ಮಿಶ್ರ ಲೋಹಗಳನ್ನು ಉಂಟುಮಾಡುತ್ತವೆ. ಇವುಗಳ ಹೆಚ್ಚಿನ ಗುಣಲಕ್ಷಣಗಳು ಲೋಹ ಮತ್ತು ಅಲೋಹಗಳ ಮಧ್ಯದ ಸ್ಥಿತಿಯನ್ನು ಅಥವಾ ಎರಡನ್ನೂ ಹೋಲುತ್ತವೆ. ಅವುಗಳು ಕಠಿಣವಾದವುಗಳಾದ್ದರಿಂದ ಅವುಗಗಳನ್ನು ಲೋಹಗಳಾಗಿ ಮತ್ತು ಅಲೋಹಗಳಾಗಿ ಬಳಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ, ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಗಳಾಗಿ, ಗಾಜಿನ ತಯಾರಿಕೆಯಲ್ಲಿ, ಸೆಮಿ ಕಂಡಕ್ಟರ್ ಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.